ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಾಳೆ ಮುಸ್ಲಿಮ್ ಧರ್ಮಗುರುಗಳು ಭಾಗಿಯಾಗುವ ಮಿಲಾದುನ್ನಬಿ ಸಮಾವೇಶ ಈಗ ವಿವಾದಕ್ಕೆ ಕಾರಣವಾಗಿದೆ. ಸಮಾವೇಶ ಹೆಸರಿನಲ್ಲಿ ಧರ್ಮ ಪ್ರಚಾರ ಇದರ ಉದ್ದೇಶ ಎಂದು ಬಿಜೆಪಿ ಆರೋಪಿಸಿದರೆ ಹಾಗೇನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಪ್ರವಾಸೀ ವೀಸಾದಡಿಯಲ್ಲಿ ಬರುವ ಧಾರ್ಮಿಕ ಮುಖಂಡರಿಂದ ಧಾರ್ಮಿಕ ಪ್ರಚಾರ ಭಾಷಣ ಮಾಡಿಸುವುದು ಸಮಾವೇಶದ ಉದ್ದೇಶ ಎಂದು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗುತ್ತಿದ್ದಾರೆ. ಇದು ತುಷ್ಠೀಕರಣದ ಪರಮಾವಧಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಅರಮನೆ ಮೈದಾನದಲ್ಲಿ ನಡೆಯಲಿರುವ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಪ್ರವಾಸೀ ವೀಸಾ ಪಡೆದು ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಆ ರೀತಿ ಏನೂ ನಡೆಯುತ್ತಿಲ್ಲ. ನಾನೂ ಆಯೋಜಕರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
ಇನ್ನು ಗೃಹಸಚಿವ ಜಿ ಪರಮೇಶ್ವರ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು ವಿದೇಶೀಯರನ್ನು ಕರೆಯಬೇಡಿ, ಇದರಿಂದ ಕಾನೂನು ಉಲ್ಲಂಘನೆಯಾಗುತ್ತದೆ ಎಚ್ಚರಿಕೆ ನೀಡಿದ್ದೇವೆ. ಒಂದೊಮ್ಮೆ ಯಾರಾದರೂ ಬಂದರೆ ಅವಕಾಶ ಕೊಡಬೇಡಿ ಎಂದಿದ್ದೇವೆ ಎಂದಿದ್ದಾರೆ.