ಬೆಂಗಳೂರು: ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ.ಎನ್. ರಾಜಣ್ಣ ಅವರು ಬಿಜೆಪಿಗೆ ಅರ್ಜಿ ಹಾಕಿದ್ದು, ನೂರಕ್ಕೆ ನೂರರಷ್ಟು ಅವರು ಬಿಜೆಪಿ ಸೇರುತ್ತಾರೆ ಎಂದು ದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಣ್ಣ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರ ಹಿಂದೆ ಯಾರ ಷಡ್ಯಂತ್ರವೂ ಇಲ್ಲ. ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ರಾಜಣ್ಣ ವಜಾಗೊಂಡಿದ್ದಾರೆ. ತಮ್ಮ ಮಾತಿನಿಂದಲೇ ಕೆಟ್ಟಿದ್ದಾರೆ. ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಟಿದರು.
ಸಚಿವರಾಗಿದ್ದಾಗ ರಾಜಣ್ಣ ಹೇಗೆ ನಡೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಮಾತುಗಳು, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬಂತಿದ್ದವು ಎಂದು ಲೇವಡಿ ಮಾಡಿದರು.
ರಾಜಣ್ಣ ಈಗ ಪಕ್ಷ ತ್ಯಜಿಸಲು ಬೇಕೆಂದೇ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೆಹಲಿಯಲ್ಲಿ ಸಮಾವೇಶ ಮಾಡಲು ಮುಂದಾಗಿರುವ ಅವರು, ಅದೇನು ಮಾಡುತ್ತಾರೊ ಮಾಡಲಿ. ಅವರು ಬಿಜೆಪಿಗೆ ಹೋಗುತ್ತಿದ್ದಾರೊ ಇಲ್ಲವೊ ಎಂಬುದನ್ನು ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದ್ರೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರ ಇಲ್ಲದಿದ್ದಿದ್ದರೆ ಇಷ್ಟೊತ್ತಿಗಾಗಲೇ ಬಿಜೆಪಿಯಲ್ಲಿ ಇರುತ್ತಿದ್ದರು. ಈಗ ಒಂದು ಕಾಲನ್ನು ಬಿಜೆಪಿಯಲ್ಲಿಟ್ಟಿರುವ ರಾಜಣ್ಣ, ಆ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.