ಬೆಂಗಳೂರು: ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಒಂದು ಕ್ರಾಂತಿಕಾರಿ, ಐತಿಹಾಸಿಕ ಸುಧಾರಣೆಯ ನಿರ್ಧಾರವನ್ನು ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಮತ್ತು ಬಿಜೆಪಿ ರಾಜ್ಯ ಘಟಕವು ಇದನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ. ಧನ್ಯವಾದ ಸಮರ್ಪಿಸಲು ಬಯಸುವುದಾಗಿ ಹೇಳಿದರು.
ಹಿಂದೆ ದೇಶದಲ್ಲಿ ಒಂದು ದೇಶ, ಒಂದು ಮಾರುಕಟ್ಟೆ ಇರಲಿಲ್ಲ; ರಾಜ್ಯ ರಾಜ್ಯದ ನಡುವೆ ನಿರ್ಬಂಧ, ಅಡಚಣೆಗಳಿದ್ದವು. ಇದನ್ನು ಉತ್ತಮಗೊಳಿಸಲು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ಅವರು ಮತ್ತು ಎಲ್ಲ ರಾಜ್ಯ ಸರಕಾರಗಳು ನಿರ್ಧಾರ ಮಾಡಿದ್ದವು. ಒಮ್ಮತ, ಒಗ್ಗಟ್ಟಿನಿಂದ ಜಿಎಸ್‍ಟಿ ಅನುಷ್ಠಾನ ಮಾಡಲಾಯಿತು ಎಂದು ವಿವರಿಸಿದರು.
ಕೈಗಾರಿಕಾ ವಲಯ, ನಾಗರಿಕರ ಬೇಡಿಕೆಯ ಅನುಗುಣವಾಗಿ ಈಗ ಸ್ಲ್ಯಾಬ್‍ಗಳಲ್ಲಿ ಬದಲಾವಣೆ ತರಲಾಗಿದೆ. ಸಡಿಲ- ಸರಳ- ಸುಧಾರಿತ ದರಗಳನ್ನು ಜಾರಿಗೊಳಿಸಲಾಗುತ್ತಿದೆ. ಎರಡು ಸ್ಲ್ಯಾಬ್ ವ್ಯವಸ್ಥೆ ತರಲು ಕೋರಿಕೆ ಇತ್ತು ಎಂದು ತಿಳಿಸಿದರು. ಶೇ 12 ಮತ್ತು ಶೇ 28 ಇದ್ದುದನ್ನು ತೆಗೆದುಹಾಕಿ ಈಗ ಶೇ 5 ಮತ್ತು ಶೇ 18 ಸ್ಲ್ಯಾಬ್ ಜಾರಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಹಣದುಬ್ಬರ ನಿಯಂತ್ರಣ, ಉತ್ಪಾದನೆ ಹೆಚ್ಚಳಕ್ಕೆ ಇದು ಪೂರಕ ಎಂದು ಅವರು ಹೇಳಿದರು. ಮಾರುಕಟ್ಟೆ ವಿಸ್ತರಣೆಯ ವಿಚಾರವನ್ನೂ ಗಮನ ಹರಿಸಿದ್ದಾರೆ ಎಂದರು.
ಜೀವ ರಕ್ಷಣೆ, ಆರೋಗ್ಯ ರಕ್ಷಣೆ, ಕೃಷಿಕರಿಗೆ ನೆರವು
ಇದರಲ್ಲಿ ಪ್ರಮುಖವಾಗಿ ಜೀವವಿಮೆ, ಆರೋಗ್ಯ ವಿಮಾದಾರರಿಗೆ ನೆರವು ಲಭಿಸಲಿದೆ. ಇವುಗಳ ತೆರಿಗೆ ದರವನ್ನು ಶೇ 0 ಗೆ ತಂದಿದ್ದಾರೆ. ಇದು ಬಹಳ ಒಳ್ಳೆಯ ಬೆಳವಣಿಗೆ, ಜೀವ ರಕ್ಷಣೆ ಮತ್ತು ಆರೋಗ್ಯ ರಕ್ಷಣೆ ಕೈಗೆಟಕುವ ರೀತಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಕೃಷಿ ಕ್ಷೇತ್ರದಲ್ಲೂ ಶೇ 12 ತೆರಿಗೆ ಇದ್ದುದನ್ನು ಶೇ 5ಕ್ಕೆ ಇಳಿಸಿದ್ದಾರೆ. ಗ್ರಾಹಕರ ದಿನೋಪಯೋಗಿ ವಸ್ತುಗಳ ದರವನ್ನು ಶೇ 0-5 ಗೆ ತಂದಿದ್ದಾರೆ. ಆಟೋಮೊಬೈಲ್ ಕೈಗಾರಿಕೆ ಕ್ಷೇತ್ರಕ್ಕೆ ಸಂಚಲನ ಮೂಡಿಸುವಂಥ ನಿರ್ಧಾರ ಹೊರಬಿದ್ದಿದೆ ಎಂದು ತಿಳಿಸಿದರು.
ಎಲ್ಲ ಸರಕಾರಗಳ ಸಹಕಾರದೊಂದಿಗೆ ಒಮ್ಮತದ ನಿರ್ಣಯ ಇದಾಗಿದೆ ಎಂದು ವಿವರ ನೀಡಿದರು. ಪಕ್ಷಾತೀತವಾಗಿ ಪ್ರಗತಿಪರವಾಗಿ ನಿರ್ಧಾರ ಹೊರಬಿದ್ದಿದೆ ಎಂದು ಹೇಳಿದರು. ಇದಕ್ಕಾಗಿ ಪ್ರಧಾನಿ ಮೋದಿಜೀ, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ತೆರಿಗೆ ದರವನ್ನು ಹೆಚ್ಚಿಸುತ್ತ ಸಾಗಿದೆ. 1.5 ಲಕ್ಷ ಕೋಟಿಗಿಂತ ಹೆಚ್ಚಿನ ತೆರಿಗೆಯನ್ನು ಅದು ಅಧಿಕಾರಕ್ಕೆ ಬಂದ ಬಳಿಕ ಸಂಗ್ರಹಿಸಿದೆ. ಆಸ್ತಿ ತೆರಿಗೆ, ವಾಹನ ತೆರಿಗೆ, ಕಸದ ತ್ಯಾಜ್ಯ ಬಳಕೆದಾರರ ಶುಲ್ಕ, ಅಬಕಾರಿ, ಪೆಟ್ರೋಲ್, ಡೀಸೆಲ್, ವಿದ್ಯುತ್, ನೀರು, ಬಸ್ ಪ್ರಯಾಣದರ, ಮೆಟ್ರೋ, ಆಸ್ಪತ್ರೆ ಒಪಿಡಿ ಶುಲ್ಕ ಸೇರಿ ಎಲ್ಲ ಕಡೆ ದರ ಏರಿಕೆ ಮಾಡಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಮನ ಬಂದಂತೆ ದುಬಾರಿ ದರ ವಿಧಿಸಿದ್ದಾರೆ. ಕೇಂದ್ರವು ಆಡಳಿತದಲ್ಲಿ ಸರಳೀಕರಣ ಮಾಡಬೇಕಿತ್ತು; ಪರಿಹಾರವನ್ನೂ ಕೊಡಲಾಗಿದೆ; ದರದಲ್ಲಿ ಇಳಿಕೆ ಮಾಡಲಾಗಿದೆ ಎಂದು ಅವರು ನುಡಿದರು.
ಇದೆಲ್ಲ ಪ್ರಗತಿಪರ, ವೈಜ್ಞಾನಿಕ, ಸಾಂದರ್ಭಿಕ ಹಾಗೂ ಸಮಯೋಚಿತ ನಿರ್ಧಾರಗಳು ಎಂದು ಮೆಚ್ಚಿಕೊಂಡರು. ಉತ್ಪಾದನೆ ಹೆಚ್ಚಳ, ಕೈಗಾರಿಕೆಗಳಿಗೆ ಪ್ರಯೋಜನ, ಆರ್ಥಿಕ ಕ್ಷೇತ್ರದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟು ಇವೆಲ್ಲ ನಿರ್ಧಾರ ಹೊರಬಿದ್ದಿದೆ. ಇಷ್ಟು ಪ್ರಮಾಣದ ಜಿಎಸ್‍ಟಿ ಬರಲಿದೆ ಎಂದು ಯಾರು ಅಂದುಕೊಂಡಿದ್ದರು ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಆರ್ಥಿಕ ಪ್ರಕೋಷ್ಠದ ಸಂಚಾಲಕ ಪ್ರಶಾಂತ್ ಜಿ.ಎಸ್. ಅವರು ಭಾಗವಹಿಸಿದ್ದರು.