ಬೆಂಗಳೂರು: ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಸಾಲದ ಹಣ ಎಲ್ಲಿ ಹೋಯ್ತು, ಎಲ್ಲಿ ವಿನಿಯೋಗವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ನಿಮ್ಮ ಲೆಕ್ಕನೂ ಹೇಳಿ ಸ್ವಾಮಿ ಎಂದಿದ್ದಾರೆ.
ಮೋದಿ ಸರ್ಕಾರದ ಸಾಲದ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಸಾಲವೂ ತಪ್ಪಲಿಲ್ಲ, ತುಪ್ಪವೂ ಸಿಗಲಿಲ್ಲ. ಇದು ಮೋದಿ ಮ್ಯಾಜಿಕ್!
- 1947ರಿಂದ 2014ರವರೆಗೆ ಭಾರತದ ಬಾಹ್ಯ ಸಾಲ - 54 ಲಕ್ಷ ಕೋಟಿ
- 2014ರಿಂದ 2025ರವರೆಗೆ 200.16 ಲಕ್ಷ ಕೋಟಿಗೆ ಏರಿದೆ
- ಕೇವಲ 10 ವರ್ಷಗಳಲ್ಲಿ 130 ಲಕ್ಷ ಕೋಟಿ ಸಾಲ ಮಾಡಿದೆ ಬಿಜೆಪಿಯ ಕೇಂದ್ರ ಸರ್ಕಾರ
- ಪಾವತಿಸುತ್ತಿರುವ ಬಡ್ಡಿ 12.76 ಲಕ್ಷ ಕೋಟಿ!
ಸ್ವತಂತ್ರಾನಂತರ 67 ವರ್ಷಗಳಲ್ಲಿ ಶೂನ್ಯದಿಂದ ದೇಶವನ್ನು ಕಟ್ಟಲಾಗಿದೆ,
ಬೃಹತ್ ಡ್ಯಾಮ್ ಗಳನ್ನು, ಬೃಹತ್ ಕೈಗಾರಿಕೆಗಳನ್ನು, ವಿಸ್ತಾರದ ರೈಲ್ವೆ ವ್ಯವಸ್ಥೆಯನ್ನು, ಏಮ್ಸ್ ನಂತಹ ಸುಸಜ್ಜಿತ ಆಸ್ಪತ್ರೆಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಾಗಿದೆ, ಬಾಹ್ಯಾಕಾಶ ಸಾಧನೆಗಳನ್ನು ಮಾಡಲಾಗಿದೆ, ಮೂರು ಯುದ್ಧಗಳನ್ನು ಎದುರಿಸಲಾಗಿದೆ, ಜಗತ್ತಿನ 4ನೇ ಶಕ್ತಿಶಾಲಿ ಸೈನ್ಯವನ್ನು ಕಟ್ಟಲಾಗಿದೆ, ರಸ್ತೆ, ನೀರು, ವಿದ್ಯುತ್ ನಂತಹ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ, ಅಣು ಪರೀಕ್ಷೆ ನಡೆಸಲಾಗಿದೆ.
67ವರ್ಷಗಳಲ್ಲಿನ ಇಷ್ಟೆಲ್ಲಾ ಸಾಧನೆಗಳ ಹೊರತಾಗಿಯೂ ಭಾರತದ ಸಾಲ 54 ಲಕ್ಷ ಕೋಟಿ ಮಾತ್ರವಿತ್ತು, ಆದರೆ ಕೇವಲ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಸಾಲ ಮಾಡಿದ ಮೋದಿ ಸರ್ಕಾರ ದೇಶಕ್ಕೆ ಕೊಟ್ಟಿದ್ದೇನು? ಈ ಸಾಲದ ಹಣ ಎಲ್ಲಿ ಹೋಯ್ತು? ಎಲ್ಲಿ ವಿನಿಯೋಗವಾಯ್ತು?
ತೆರಿಗೆ ಹೆಸರಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದರೂ ಇಷ್ಟು ಮೊತ್ತದ ಸಾಲ ಮಾಡಿದ್ದೇಕೆ? ಯಾರ ಜೇಬು ತುಂಬಿಸುವುದಕ್ಕೆ? ಬಿಜೆಪಿ ಈ ಬಗ್ಗೆ ಮಾತನಾಡುವುದೇ? ಪ್ರಧಾನಿ ಕೇವಲ ಒಂದೇ ಒಂದಾದರೂ ಪತ್ರಿಕಾಗೋಷ್ಠಿ ನಡೆಸಿ ಈ ಬೃಹತ್ ಸಾಲದ ಕಾರಣವನ್ನು ತಿಳಿಸುವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಸ್ವಲ್ಪ ಕರ್ನಾಟಕದ ಲೆಕ್ಕಾನೂ ಹೇಳಿ ಸ್ವಾಮಿ? ನೀವು ಎಷ್ಟು ಸಾಲ ಮಾಡಿದ್ರಿ ಅದು ಹೇಗೆ ಖರ್ಚಾಯ್ತು ಎಂದು ಹೇಳಿ. ಪ್ರಿಯಾಂಕ್ ಖರ್ಗೆಯವರೇ ಸ್ವಲ್ಪ ಅರ್ಥಶಾಸ್ತ್ರ ತಿಳಿದುಕೊಂಡು ಮಾತನಾಡಿ. ಸಾಲದ ಮೊತ್ತ ಮತ್ತು ಜಿಡಿಪಿ ಬೆಳವಣಿಗೆ ಪ್ರಮಾಣ ಹೋಲಿಕೆ ಮಾಡಿ ನೋಡಿ ಎಂದು ಸಲಹೆ ನೀಡಿದ್ದಾರೆ.