ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಅದರಿಂದ ರಸ್ತೆ ನಿರ್ಮಾಣವನ್ನು ಮಾಡಲಾಗಿದೆ. ಅಧಿಕಾರಿಗಳ ಬದ್ಧತೆಯನ್ನು ಮೆಚ್ಚಿ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಸುಂದರ-ಸದೃಢ ರಸ್ತೆಗಳ ನಿರ್ಮಾಣ. ತ್ಯಾಜ್ಯ ನಿರ್ವಹಣೆ ಪ್ರತಿ ನಗರಗಳಿಗೂ ಸವಾಲಾಗಿದೆ. ಅದರಲ್ಲಿಯೂ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿ ಜಾಗತಿಕ ಸಮಸ್ಯೆಯೂ ಹೌದು. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಲಾಗಿದೆ.
ದಕ್ಷಿಣ ಕನ್ನಡ ಹಾಗು ಉಡುಪಿ ಅವಳಿ ಜಿಲ್ಲೆಗಳಲ್ಲಿ ಒಟ್ಟು 223 ಗ್ರಾಮ ಪಂಚಾಯತಿಗಳಿದ್ದು, ತ್ಯಾಜ್ಯ ನಿರ್ವಹಣೆಯ ನಾಲ್ಕು MRF ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಐದು ತಿಂಗಳಲ್ಲಿ ಸಂಗ್ರಹವಾದ 170 ಟನ್ ಪ್ಲಾಸ್ಟಿಕ್ ಬಳಸಿ ಮಂಗಳೂರಿನಲ್ಲಿ 50 ಕಿಲೋ ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಎಂಆರ್‌ಎಫ್‌ನಲ್ಲಿ ಸಂಗ್ರಹಿಸಿದ ಕಡಿಮೆ ಸಾಂದ್ರತೆಯ ಪಾಲಿಥೀನ್ ಅನ್ನು ಬಳಕೆ ಮಾಡಲಾಗಿದ್ದು, ಹೆಚ್ಚು ಕಾಲ ಬಾಳಿಕೆ ಬರಲಿದೆ. ರಸ್ತೆಗಳು ಬಿರುಕು ಸಹ ಬಿಡುವುದಿಲ್ಲ.
ಸಂಗ್ರಹಿಸಿದ ತ್ಯಾಜ್ಯವನ್ನು ಗ್ರಾಮ ಪಂಚಾಯತಿಗಳ ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ವಿಂಗಡಿಸಿ, ಒಣ ತ್ಯಾಜ್ಯವನ್ನು MRF ಘಟಕಗಳಿಗೆ ರವಾನಿಸಲಾಗುತ್ತಿದೆ. ಪ್ರತಿನಿತ್ಯ ಸರಾಸರಿ 12 ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಈ MRF ಘಟಕಗಳಲ್ಲಿ ಸಂಗ್ರಹಣೆಯಾದ ತ್ಯಾಜ್ಯವನ್ನು 33 ಪ್ರತ್ಯೇಕ ವಿಭಾಗಗಳಾಗಿ ವಿಂಗಡಣೆ ಮಾಡಿ ಮರುಬಳಕೆಗೆ ಕಳುಹಿಸುತ್ತಾರೆ.
MRF ಘಟಕಗಳಲ್ಲಿ ಒಟ್ಟು 137 ಕಾರ್ಯನಿರ್ವಾಹಕರು ಇದ್ದು, ಇವರಲ್ಲಿ 80% ರಷ್ಟು ಮಹಿಳೆಯರು ಇರುವುದು ವಿಶೇಷ. ಸಂಗ್ರಹವಾದ ತ್ಯಾಜ್ಯದಿಂದಲೇ ಬರುವ ಆದಾಯದಿಂದ ಇಲ್ಲಿನ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ.
ಇಂತಹ ಪರಿಸರ ಸ್ನೇಹಿ ಯೋಜನೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಅಧಿಕಾರಿಗಳ ಬದ್ಧತೆ ಮತ್ತು ಕಾಳಜಿ ನಿಜಕ್ಕೂ ಶ್ಲಾಘನೀಯ