Select Your Language

Notifications

webdunia
webdunia
webdunia
webdunia

ಅವರೇ ಹೇಳಿರುವಂತೆ ನಾಯಿಯೇ ನಾರಾಯಣ, ಹಾಗಾದ್ರೆ ನಾರಾಯಣಸ್ವಾಮಿಯನ್ನು ಏನೆಂದು ಕರೆಯಬೇಕು: ಪ್ರಿಯಾಂಕ್ ಖರ್ಗೆ

ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ

Sampriya

ಬೆಂಗಳೂರು , ಶನಿವಾರ, 24 ಮೇ 2025 (23:24 IST)
ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಬಹಿರಂಗವಾಗಿ ನಾಯಿ ಎಂದು ಬೈದಿದ್ದು ನನಗೆ. ಬೈಸಿಕೊಂಡ ಸಂತ್ರಸ್ತ ನಾನು ಆದರೆ ನನ್ನ ಮೇಲೆಯೇ ಅವರು ಆರೋಪ ಮಾಡುತ್ತಿರುವುದು ಕುಚೋದ್ಯದ ಸಂಗತಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾರಾಯಣಸ್ವಾಮಿ ಅವರಿಗೆ ಎರಡು ನಾಲಿಗೆಯಿದೆ. ಒಂದು ನಾಲಿಗೆ ಕಲ್ಯಾಣ ಕರ್ನಾಟಕದಲ್ಲಿ, ಮತ್ತೊಂದು ಬೆಂಗಳೂರಿನಲ್ಲಿ. ರಾಜ್ಯಪಾಲರನ್ನು ಭೇಟಿಯಾಗಿ ಬಂದು ನಾನು ಪ್ರಿಯಾಂಕ್ ಖರ್ಗೆಗೆ ಏನೂ ಹೇಳೇ ಇಲ್ಲ. ನಾನು ನಾಯಿ ಎಂದಿಲ್ಲ.‌ ಇದನ್ನು ಅವರೇ ಭಾವಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. (ಈ ವೇಳೆ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗಳ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದರು.)

ಅವರು ನನಗೆ ಬೈದು ನನ್ನ ಮತ ಕ್ಷೇತ್ರಕ್ಕೆ ಹೋಗುತ್ತಾರೆ.  ಅವರೇ ನನಗೆ ಬೈದು, ಜನರಿಂದ ಬೈಸಿಕೊಂಡು, ಈಗ ಅವರೇ ನನ್ನ ವಿರುದ್ಧ ತಿರುಗಿ ಮೆರವಣಿಗೆ ಮಾಡುತ್ತಿದ್ದಾರೆ.‌ ಇವರ ತರ್ಕವೇ ನನಗೆ ತಿಳಿಯುತ್ತಿಲ್ಲ‌.

ನಾಳೆಯಿಂದ ನಾರಾಯಣಸ್ವಾಮಿ ಅವರನ್ನು ಏನೆಂದು ಕರೆಯಬೇಕು ಎಂದು ಅವರು ಸ್ಪಷ್ಟಪಡಿಸಬೇಕು.‌ ಅವರೇ ಹೇಳಿರುವಂತೆ ನಾಯಿಯೇ ನಾರಾಯಣ. ಅವರ ಹೆಸರನ್ನು ತೆಗೆದು ನಾವು ಏನೆಂದು ಕರೆಯಬಹುದು. ಇದನ್ನು ನಾನು ಹೇಳಿಲ್ಲ. ಅವರೇ ಹೇಳಿದ್ದಾರೆ. ನಾನೇ ಅಫಿಡವಿಟ್ ಹಾಕಿಸುತ್ತೇನೆ.

ಬಿಜೆಪಿಯವರು ಕಲಬುರ್ಗಿಗೆ ಬಂದು ಏನು ಬೇಕಾದರೂ ಮಾಡಲಿ. ಅಲ್ಲಿನ ಜನ ನಮ್ಮ ಕೆಲಸವನ್ನು ನೋಡಿ ನಮ್ಮನ್ನು ಆಯ್ಕೆ ಮಾಡಿದ್ದಾರೆ‌. ಮುಂದೆಯೂ ಮಾಡುತ್ತಾರೆ.‌ ಏಕೆಂದರೆ ನಿಮ್ಮಂತೆ ನಮ್ಮಲ್ಲಿ 40 ಪರ್ಸೆಂಟ್, ‌20 ಪರ್ಸೆಂಟ್ ಇಲ್ಲ.‌ ಕಲ್ಯಾಣ ಕರ್ನಾಟಕವನ್ನ ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶ ಹೊರತಾಗಿ ಬೇರೆ ಏನೂ ಇಲ್ಲ.

ಈಗ ಅಕ್ಕಿಕಳ್ಳನಿಗೆ ಟಿಕೆಟ್ ನೀಡಿದ್ರಿ, ಮುಂದೆ ಯಾವ ಕಳ್ಳನಿಗೆ ನೀಡುತ್ತಾರೋ ಗೊತ್ತಿಲ್ಲ. ನೀವು ಎಷ್ಟೇ ತಿಪ್ಪರಲಾಗ ಹಾಕಿದರೂ ಸಹ ಚಿತ್ತಾಪುರ ಜನತೆ ಅಭಿವೃದ್ಧಿಗೆ ಮತ ಹಾಕುತ್ತಾರೆ. ಕಲಬುರ್ಗಿಗೆ ಜನತೆಗೆ ಅಭಿವೃದ್ಧಿಯ ನಿರೀಕ್ಷೆ ಇದ್ದರೆ ಅದು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ.

ನಾರಾಯಣಸ್ವಾಮಿ ಅವರೇ ನೀವೇ ಮಾತನಾಡುವ ಬರದಲ್ಲಿ ಹೇಳಿದೆ ಎಂದು ಒಪ್ಪಿಕೊಂಡಿದ್ದೀರಿ. ನಾನು ನಿಮ್ಮಿಂದ ಎಂದಿಗೂ ಕ್ಷಮೆ ಬಯಸುವುದಿಲ್ಲ.

ಕಾಂಗ್ರೆಸ್ ಅವರು ಎಂದಿಗೂ ಮೋದಿಯವರನ್ನು ಪ್ರಶ್ನೆ ಮಾಡಬಾರದು. ದೇಶದ ವಿಚಾರ, ನಾಗರೀಕರ ವಿಚಾರ ಸೇರಿದಂತೆ ಯಾವುದೇ ವಿಚಾರ ಇದ್ದರೂ ಪ್ರಶ್ನೆ ಮಾಡಬಾರದು ಎಂದು ಮಾಧ್ಯಮ ಗೋಷ್ಠಿಯಲ್ಲಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.

ರಿಪಬ್ಲಿಕ್ ಕಲಬುರ್ಗಿ ಎಂದು ಪ್ರತಿಭಟನೆ ಮಾಡಲು ಅಲ್ಲಿಗೆ ಹೋಗಿದ್ದಾರೆ. ಯಾವ ರಿಪಬ್ಲಿಕ್ ಇದೆ ಎಂದು ಅಲ್ಲಿಗೆ ಹೋಗಿದ್ದಾರೋ ಅವರಿಗೆ ಕೇಳಬೇಕು. ಕಲಬುರ್ಗಿಗೆ ಹೋಗಿ ಜನರ ಮುಂದೆ 'ನನಗೆ ಅನ್ಯಾಯವಾಗಿದೆ' 'ದಿಗ್ಬಂದನ ಹಾಕಲಾಗಿದೆ' 'ಮೋಸ, ಅತ್ಯಾಚಾರ ನಡೆಸಿದ್ದಾರೆ' ಎಂದು ಅಳುತ್ತಿದ್ದಾರೆ.

ಎಲ್ಲಾ ವಿಪಕ್ಷದ ನಾಯಕರು ಪದೇ, ಪದೇ ಕಲಬುರ್ಗಿಗೆ ಬರುತ್ತಿದ್ದಾರೆ. ಅಶೋಕ್, ವಿಜಯೇಂದ್ರ, ಸಿ.ಟಿ.ರವಿ, ರವಿಕುಮಾರ್ ಅವರು ಸೇರಿದಂತೆ ಅನೇಕರು ಬಂದಿದ್ದಾರೆ. ಇದು ನನಗೆ ಅತ್ಯಂತ ಸಂತಸದ ವಿಚಾರ. ಆದರೆ ಇವರು ಅಧಿಕಾರಕ್ಕೆ ಬಂದಾಗ ಒಮ್ಮೆಯೂ ಕಲಬುರ್ಗಿಗೆ ಬಂದಿಲ್ಲ.‌ ಈಗ ಇವರದ್ದೆಲ್ಲಾ ಇಲ್ಲಿಗೆ 4ನೇ ಭೇಟಿ.

ಕಲಬುರ್ಗಿಗೆ ಬಂದು ರೈತರ ಪರವಾಗಿ, ಸರ್ಕಾರದ ವೈಫಲ್ಯಗಳು ಇದ್ದರೆ, ನಮ್ಮ ತಪ್ಪುಗಳು ಕಂಡರೆ ಅವುಗಳ ವಿರುದ್ಧ ಮಾತನಾಡಿದರೆ ವಿರೋಧ ಪಕ್ಷದ ಕೆಲಸ ಎನ್ನಬಹುದು. ಆದರೆ ಇದುವರೆಗು ನಾಲ್ಕು ಬಾರಿಯೂ ಬಂದು ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರ್ಗಿ ಬಚಾವೋ ಎಂದು ಕೆಟ್ಟ ಹೋರಾಟ ಮಾಡುತ್ತಿದ್ದಾರೆ.

ರಾಜ್ಯ ಬಿಜೆಪಿ ನಾಯಕರೇ ನೀವು ಕಲಬುರ್ಗಿಯ ಬಿಜೆಪಿ ನಾಯಕರನ್ನು ನಂಬಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಇವರಿಂದ ನಿಮಗೆ ಸಿಗುವುದು ಅವಮಾನ ಮತ್ತು ಮುಖಭಂಗ ಮಾತ್ರ. ಉದಾಹರಣೆಗೆ ಬಿಜೆಪಿಯವರು ಮೊದಲ ಬಾರಿಗೆ ಕಲಬುರ್ಗಿಗೆ ಏತಕ್ಕೆ ಬಂದಿದ್ದರು ಎಂದರೆ, ಮಕ್ಕಳ ಹಾಲಿನ ಪುಡಿ ಕದ್ದಿದ್ದಕ್ಕೆ ‌ಬಿಜೆಪಿ ಸರ್ಕಾರದ ಸಮಯದಲ್ಲಿಯೇ ಶಿಕ್ಷೆಗೆ ಒಳಗಾದ‌ 'ಅಕ್ಕಿ ಕಳ್ಳ'ನ ಮೇಲೆ ಪ್ರಿಯಾಂಕ್ ಖರ್ಗೆ ಹಲ್ಲೆ ಮಾಡಿಸಿದ್ದಾರೆ ಎಂದು ಪ್ರತಿಭಟನೆ ಮಾಡಿದರು. ಆನಂತರ ತನಿಖೆಯಲ್ಲಿ 'ಇವರೇ ಕುಡಿದು ಜಗಳವಾಡಿ, ಅಪಘಾತವಾದ ವಾಹನವನ್ನು ಹೈದರಾಬಾದ್ ಅಲ್ಲಿ ಬಚ್ಚಿಟ್ಟು ಜೊತೆಯಲ್ಲಿ ಇದ್ದವರಿಂದಲೇ ಪರಚಿಸಿಕೊಂಡು ನಾಟಕವಾಡಿದರು.

ಯಾವುದೋ ಅಪಹರಣದ ಪ್ರಕರಣಕ್ಕೆ ನಾನೇ ಕುಮ್ಮಕ್ಕು ಕೊಟ್ಟಿದ್ದೇನೆ ಎಂದು ಅದನ್ನು ನನ್ನ ಮೇಲೆ ಹಾಕಿದರು. ಕೊನೆಗೆ ಆ ಹುಡುಗ, ಹುಡುಗಿ ಮರಳಿ ಬಂದ ಕಾರಣಕ್ಕೆ ಇವರ ಪ್ರತಿಭಟನೆ ನಿಂತು ಹೋಯಿತು. ರಾಜ್ಯ ನಾಯಕರಿಗೆ ತಪ್ಪು ದಾರಿಗೆ ಎಳೆದು ಹಾಳು ಮಾಡುತ್ತಿದ್ದಾರೆ. ವಿಜಯೇಂದ್ರ ಅವರಿಗೆ ನಮ್ಮ‌ ಭಾಗದ ರಾಜಕಾರಣ ತಿಳಿದಿಲ್ಲ. ಮರಳು ಗುಂಡಿಗೆ ವ್ಯಕ್ತಿಯೊಬ್ಬ ಬಿದ್ದು ಸತ್ತರೂ ಪ್ರಿಯಾಂಕ್ ಖರ್ಗೆ ಎಂದು ಪ್ರತಿಭಟನೆಗೆ ವಿಜಯೇಂದ್ರ ಬಂದಿದ್ದರು. ಸ್ಥಳೀಯ ನಾಯಕರ ಮಾತು ಕೇಳಿ ನೀವು ಹೀಗೆ ಮಾಡಿದರೆ ನಿಮಗೆ ರಾಜಕೀಯ ಲಾಭ ಖಂಡಿತಾ ಸಿಗುವುದಿಲ್ಲ. ತನಿಖೆಯ ನಂತರ ತಿಳಿದ ಸಂಗತಿ‌ ‌ಎಂದರೆ ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡಿ ಗಲಾಟೆ ಮಾಡಿಕೊಂಡು ಸತ್ತವನು.

ಬೀದರ್ ನ ಸಿದ್ದು ಪಾಂಚಾಳ್ ಎನ್ನುವ ಯುವಕ ಏನೋ ಬರೆದಿಟ್ಟು ಹೋಗಿದ್ದಾನೆ ಎಂದು ದೊಡ್ಡ ಪ್ರತಿಭಟನೆ ‌ಮಾಡಿದರು.‌ ಇದರಲ್ಲಿ ಒಂದು ಪ್ರಿಯಾಂಕ್ ಖರ್ಗೆ‌ ಪಾತ್ರ ಇಲ್ಲವೆಂದು ಯಾರೋ ಹೇಳಿರಬೇಕು ಅದಕ್ಕೆ ವಿಜಯೇಂದ್ರ ಅವರು ಅಂದು ಬರಲಿಲ್ಲ. ಆ ಸಿದ್ದು ಪಾಂಚಾಳ ಎನ್ನುವ ವ್ಯಕ್ತಿಯ ಕುಟುಂಬದವರ ಬಳಿಯೂ ಕ್ಷಮೆ ಕೇಳಲಿಲ್ಲ ಈ ಬಿಜೆಪಿಯವರು.

ಕಲಬುರ್ಗಿಯ ಒಬ್ಬೊಬ್ಬ ಬಿಜೆಪಿ ನಾಯಕನೂ ಅಪರಂಜಿ ಇದ್ದಂತೆ. ಈ ಬಿಜೆಪಿಯವರು ಟಿಕೆಟ್ ನೀಡುವಾಗ ಎಫ್ ಐ ಆರ್ ಓದಿಕೊಂಡು ಅವರಿಗೆ ಟಿಕೆಟ್ ನೀಡುತ್ತಾರೆ ಎನಿಸುತ್ತದೆ. ಅಪರಾಧಗಳನ್ನು ಮಾಡಿರುವುದೇ ಬಿಜೆಪಿಯವರಿಗೆ ಮಾನದಂಡ.

ಕಲಬುರ್ಗಿ ಭಾಗದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದವರು ಯಾರು ಎಂದು ಬಿಜೆಪಿ ನಾಯಕರನ್ನು ಕೇಳಬೇಕು. ಇಲ್ಲಿನ ಮುನಿರತ್ನನ ಬಗ್ಗೆ ನಮಗಿಂತ ಚೆನ್ನಾಗಿ ಮಾಧ್ಯಮಗಳಿಗೆ ತಿಳಿದಿದೆ.

ಕಲಬುರ್ಗಿಯಲ್ಲಿ ಎಲ್ಲಾ ಬಿಜೆಪಿ ನಾಯಕರು ಉದ್ದುದ್ದ ಭಾಷಣ ಮಾಡಿದ್ದಾರೆ. ಈ ಸಿ.ಟಿ.ರವಿ ಅವರಿಗೆ ನಿಜಾಮರು, ರಜಾಕಾರರು ಬಿಟ್ಟರೇ ಬೇರೆ ಏನೂ ತಿಳಿದಿಲ್ಲ. ಇವರ ಬಾಯಲ್ಲಿ ಅದೆಷ್ಟು ಬಾರಿ ಪಾಕಿಸ್ತಾನದ ಹೆಸರು ಬರುತ್ತಲೇ ಇರುತ್ತದೆ‌.

ಅಖಂಡ ಭಾರತ ಕಟ್ಟಬೇಕು ಎಂದು ಆರ್ ಎಸ್‌ಎಸ್ ಅವರು ಹೇಳುತ್ತಲೇ ಇರುತ್ತರೆ. ಅದಕ್ಕೆ ಎಲ್ಲರೂ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದಲೇ ರಾಜಕೀಯ ಪ್ರಾರಂಭ ಮಾಡಲಿ. ಅಖಂಡ ಭಾರತದ ಆರ್ ಎಸ್ ಎಸ್ ಕನಸನ್ನು ನನಸು ಮಾಡಲಿ.‌ ಸುಮ್ಮನೆ ಕರ್ನಾಟಕದಲ್ಲಿ ಕುಳಿತು ವದರಾಡುವುದು. ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೆ ಹೋಗಿ ವಾಸ ಮಾಡಲಿ. ಈ ಬಿಜೆಪಿಯವರ ಪೌರುಷ ಕೇವಲ ಮಾಧ್ಯಮ ಮತ್ತು ಮೈಕ್ ಮುಂದೆ ಮಾತ್ರ. ಮೇಲ್ಮನೆಯಲ್ಲಿ ನಡೆದ ಘಟನೆಯ ವಿಚಾರವಾಗಿ ಇನ್ನೂ ಏಕೆ ಅವರೊಬ್ಬರು ದನಿ ಪರೀಕ್ಷೆಗೆ ಒಳಪಟ್ಟಿಲ್ಲ ಜೊತೆಗೆ ಇದರ ವಿರುದ್ಧ ನ್ಯಾಯಾಲಯಕ್ಕೆ ಏಕೆ ಹೋಗಿದ್ದಾರೆ. ಅವರು ಹೇಳುವಂತೆ ನಾನು ಪ್ರಾಸ್ಟಿಟ್ಯೂಟ್ ಅಂದಿಲ್ಲ‌ ಫ್ರೆಸ್ಟ್ರೇಟ್ (ಹತಾಶ) ಎಂದು ಹೇಳಿದ್ದೇನೆ ಎಂದಿದ್ದಾರೆ. ಇದೇ ಪದಕ್ಕೆ  ನೀವು ದನಿ ಪರೀಕ್ಷೆಗೆ ಒಳಗಾಗಿ. ಸುಪ್ರೀಂ ಕೋರ್ಟ್ ವರೆಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.

ಇದಕ್ಕೆ ಶಕ್ತಿ ಇಲ್ಲದವರು ಇಲ್ಲಿಗೆ ಬಂದು ರಿಪಬ್ಲಿಕ್ ಆಫ್ ಕಲಬುರ್ಗಿ ಎಂದು ಭಾಷಣ ಹೊಡೆಯುತ್ತಾರೆ. ಇಂದಿನ ಪ್ರತಿಭಟನೆಯ ಆಶ್ಚರ್ಯಕರ ಸಂಗತಿ ಎಂದರೆ ರಿಪಬ್ಲಿಕ್ ಆಫ್ ಬಳ್ಳಾರಿ ಕಟ್ಟಿದ ಶ್ರೀರಾಮುಲು ನಮ್ಮಲ್ಲಿಗೆ ಬಂದು ಮಾತನಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ನಿಂತರೆ ಸೋಲುತ್ತೇನೆ ಎಂದು ಬಿಟ್ಟು ಓಡಿ ಹೋಗಿ ಬೇರೆ ಕಡೆ ನಿಂತ ವ್ಯಕ್ತಿ. ಕರ್ನಾಟಕದ ಪಪ್ಪು ಎಂದು ನನ್ನ ಕರೆಯುತ್ತಿದ್ದಾರೆ. ನಾನೇ ಪಪ್ಪು ಆದರೆ ಅವರು ಇನ್ನೇನು. ಹತ್ತು ಸಾಲು ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಆ ಮನುಷ್ಯನಿಗೆ.

ನನ್ನನ್ನು ಪಪ್ಪು ಎಂದು ಕರೆದಿದ್ದಾರೆ. ಯಾವುದೇ ವೇದಿಕೆಯಲ್ಲಿ ಆರ್ಥಿಕ, ಸಾಮಾಜಿಕ,ಬುಡಕಟ್ಟು ಸೇರಿದಂತೆ ಯಾವುದೇ ವಿಚಾರವಾಗಿ ನಾನು ಚರ್ಚೆ ನಡೆಸಲು ತಯಾರಿದ್ದೇನೆ ಅವರು ತಯಾರಿದ್ದಾರೆಯೇ?

ವಿಪಕ್ಷ ನಾಯಕ ಅಶೋಕ್ ಅವರು ಡಿಸಿಎಂ ಶಿವಕುಮಾರ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿಲ್ಲ ಎಂದು ಎಕ್ಸ್ (ಟ್ವೀಟ್) ಮಾಡಿದ್ದಾರೆ. ಒಂದು ಸಭೆಯಲ್ಲಿ ಇದ್ದಾಗ ನನ್ನ ಮುಂದೆಯೇ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರಿಲ್ಲ ಎಂದರು ಏನಾಗಲಿದೆ.  

ಮಾಧ್ಯಮ ಗೋಷ್ಟಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ ಇದ್ದರು

Share this Story:

Follow Webdunia kannada

ಮುಂದಿನ ಸುದ್ದಿ

Covid 19: ಭಾರತದ ಈ ನಗರದಲ್ಲಿ ಹೆಚ್ಚುತ್ತಿದೆ ಕೋವಿಡ್ 19 ಪ್ರಕರಣಗಳು