ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳದೇ ಕೇಳದೇ ವಿದೇಶಕ್ಕೆ ಹೋಗಿ ಬಿಡ್ತಾರೆ ಎಂದು ಸಿಆರ್ ಪಿ ಎಫ್ ಆಕ್ಷೇಪ ವ್ಯಕ್ತಪಡಿಸಿದೆ.
ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕ. ಅವರಿಗೆ ಸಿಆರ್ ಪಿಎಫ್ ಯೋಧರಿಂದ ಭದ್ರತೆ ಒದಗಿಸಲಾಗುತ್ತದೆ. ಆದರೆ ಅವರು ವಿದೇಶಕ್ಕೆ ಹೋಗುವಾಗ ಭದ್ರತಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ರಾಹುಲ್ ಗಾಂಧಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿಯ ಈ ವರ್ತನೆಯಿಂದ ಭದ್ರತೆಗೆ ಸಮಸ್ಯೆಯಾಗುತ್ತಿದೆ. ಭದ್ರತಾ ನಿಯಮಗಳನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಿಆರ್ ಪಿಎಫ್ ಮುಖ್ಯಸ್ಥ ಸುನಿಲ್ ಜೂನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಪತ್ರದ ಪ್ರತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ನೀಡಲಾಗಿದೆ. ಇತ್ತೀಚೆಗಷ್ಟೇ ರಾಹುಲ್ ವಿದೇಶ ಪ್ರವಾಸ ಮಾಡಿ ಬಂದಿದ್ದರು. ಇದಕ್ಕೆ ಮೊದಲೂ ಅನೇಕ ಬಾರಿ ಅವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡದೇ ವಿದೇಶ ಪ್ರವಾಸ ಮಾಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ನಿಯಮ ಉಲ್ಲಂಘಿಸಿ ಇಟೆಲಿ, ವಿಯೆಟ್ನಾಂ, ದುಬೈ, ಕತಾರ್ ಎಂದು ಹಲವು ದೇಶಗಳಿಗೆ ತೆರಳಿದ್ದರು ಎಂದು ಆರೋಪಿಸಲಾಗಿದೆ.