ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮೆ ತಣ್ಣಗಾಗಿದ್ದ ಸಿಎಂ ಕುರ್ಚಿ ಕದನ ಮತ್ತೆ ಭುಗಿಲೇಳಲು ಈ ಒಬ್ಬರು ನಾಯಕರ ಹೇಳಿಕೆಯೇ ಕಾರಣವಾಗಿದೆ.
ಹೈಕಮಾಂಡ್ ಆದೇಶದ ಕಾರಣಕ್ಕೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಅಧಿವೇಶನ ಮುಗಿಯುವವರೆಗೂ ಸುಮ್ಮನಿರುವಂತೆ ಸಂದೇಶ ಬಂದಿತ್ತು. ಅದರಂತೆ ಇಬ್ಬರೂ ನಾಯಕರು ಎಲ್ಲವೂ ಸರಿಯಾಗಿದೆ ಎಂದು ಸಂದೇಶ ಸಾರಿದ್ದರು.
ಆದರೆ ಅಧಿವೇಶನ ಮುಗಿಯುವುದು ಬಿಡಿ, ಆರಂಭದಲ್ಲೇ ಮತ್ತೆ ನಾಯಕತ್ವ ವಿವಾದ ಭುಗಿಲೆದ್ದಿದೆ. ಇದಕ್ಕೆ ಕಾರಣ ಸಿಎಂ ಪುತ್ರ ಯತೀಂದ್ರ ಹೇಳಿಕೆ ಎನ್ನಬಹುದು. ಮಾಧ್ಯಮಗಳ ಮುಂದೆ ತಮ್ಮ ತಂದೆಯೇ ಐದು ವರ್ಷವೂ ಸಿಎಂ, ಡಿಕೆ ಶಿವಕುಮಾರ್ ಹೈಕಮಾಂಡ್ ಗೆ ಕೇಳಿದ್ರು. ಆದರೆ ಅವರು ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದ್ದು ಮತ್ತೆ ಕುರ್ಚಿ ಫೈಟ್ ಗೆ ಕಾರಣವಾಗಿದೆ.
ಇದರ ನಡುವೆ ಬೆಳಗಾವಿ ಅಧಿವೇಶನದ ನಡುವೆಯೂ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಡಿನ್ನರ್ ಮೀಟಿಂಗ್ ನಡೆಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರ ಬೆನ್ನಲ್ಲೇ ಈಗ ಡಿಕೆ ಶಿವಕುಮಾರ್ ಕೂಡಾ ತಮ್ಮ ಬೆಂಬಲಿಗರ ಜೊತೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ನಾಯಕತ್ವ ವಿವಾದ ಈಗ ಮತ್ತೊಂದು ಹಂತಕ್ಕೆ ಹೋಗುವ ಲಕ್ಷಣವಿದೆ.