ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇನ್ನಾದರೂ ದ್ವೇಷದ ರಾಜಕಾರಣವನ್ನು ಬದಿಗಿಟ್ಟು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಇನ್ನಾದರೂ ದ್ವೇಷದ ರಾಜಕಾರಣವನ್ನು ಬದಿಗಿಡಬೇಕು. ಕೇಂದ್ರ ಸರ್ಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡು, ಇದರಿಂದ ರಾಜ್ಯಕ್ಕೆ ಮತ್ತು ಬಡವರಿಗೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯ ಅವರು ಇರುವಷ್ಟು ದಿನ ಉತ್ತಮ ಹೆಜ್ಜೆ ಇಡಲಿ ವಿನಂತಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ನೀಡಿದ ಆದೇಶವನ್ನು ರಾಜ್ಯದ ಹೈಕೋರ್ಟ್ ರದ್ದು ಮಾಡಿದೆ.
ಜನೌಷಧಿ ಕೇಂದ್ರಗಳನ್ನು ಮತ್ತೆ ತೆರೆಯಲು ಸೂಚಿಸಿರುವುದನ್ನು ಸ್ವಾಗತಿಸುತ್ತೇವೆ. ಜನೌಷಧಿ ಕೇಂದ್ರಗಳು ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ಕಾರ್ಯಕ್ರಮ, ಒಂದು ಕೊಡುಗೆ.
ಈ ರಾಜ್ಯದ, ದೇಶದ ಬಡಜನರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ಸಿಗಬೇಕು. ಇದರಿಂದ ಬಡವರಿಗೆ ಅನುಕೂಲ ಆಗಬೇಕೆಂಬ ಸದುದ್ದೇಶದಿಂದ ಆ ಕಾರ್ಯಕ್ರಮ ಜಾರಿಗೊಳಿಸಿದ್ದರು ಎಂದು ವಿವರಿಸಿದ್ದಾರೆ.