Publish Date: Thu, 11 Dec 2025 (10:04 IST)
Updated Date: Thu, 11 Dec 2025 (10:06 IST)
ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಬೆಳಗಾವಿಯಲ್ಲೇ ಮಹತ್ವದ ವಿದ್ಯಮಾನ ನಡೆದಿದೆ. ಅಧಿವೇಶನದ ನೆಪದಲ್ಲಿ ಬೆಳಗಾವಿಯಲ್ಲಿ ಅಹಿಂದ ನಾಯಕರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಇಷ್ಟು ದಿನ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಬಣ ರಾಜಕೀಯ, ಮೀಟಿಂಗ್ ನಡೆಯುತ್ತಿತ್ತು. ಆದರೆ ಈಗ ಅಧಿವೇಶನದ ನೆಪದಲ್ಲಿ ಬೆಳಗಾವಿಯಲ್ಲಿ ಎಲ್ಲಾ ಶಾಸಕರು ಒಟ್ಟು ಸೇರಿದ್ದಾರೆ. ಈ ನಡುವೆ ನಿನ್ನೆ ರಾತ್ರಿ ಅಹಿಂದ ನಾಯಕರ ಡಿನ್ನರ್ ಮೀಟ್ ನಡೆದಿದೆ.
ಒಂದು ವೇಳೆ ಡಿಕೆ ಶಿವಕುಮಾರ್ ರನ್ನು ಸಿಎಂ ಅಭ್ಯರ್ಥಿ ಎಂದು ಹೈಕಮಾಂಡ್ ಘೋಷಿಸಲು ಮುಂದಾದರೆ ಅಹಿಂದ ನಾಯಕತ್ವದ ದಾಳ ಉರುಳಿಸಲು ನಾಯಕರು ಸಜ್ಜಾಗಿದ್ದಾರೆ. ಈ ಹಿನ್ನಲೆಯಲ್ಲಿ ನಿನ್ನೆಯ ಮೀಟಿಂಗ್ ಮಹತ್ವ ಪಡೆದಿದೆ.
ಸದ್ಯಕ್ಕೆ ಅಧಿವೇಶನ ನಡೆಯುತ್ತಿರುವುದರಿಂದ ಹೈಕಮಾಂಡ್ ಯಾವುದೇ ನಿರ್ಧಾರಕ್ಕೆ ಬಾರದೇ ಇರಲು ತೀರ್ಮಾನಿಸಿದೆ. ಆದರೆ ಅಧಿವೇಶನ ಮುಗಿದ ಬಳಿಕ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬರಲಿದೆ. ಇದಕ್ಕಾಗಿ ಒಳಗೊಳಗೇ ಶಾಸಕರು ತಯಾರಿ ನಡೆಸುತ್ತಿದ್ದಾರೆ. ನಿನ್ನೆಯ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್, ಭೈರತಿ ಸುರೇಶ್, ಜಮೀರ್ ಅಹ್ಮದ್, ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು ಎನ್ನಲಾಗಿದೆ.