ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನ ಬೂದಿ ಮುಚ್ಚಿದ ಕೆಂಡದಂತಿರುವಾಗ ಸಿಎಂ ಸಿದ್ದರಾಮಯ್ಯಗೆ ಪುತ್ರ ಯತೀಂದ್ರನಿಂದಲೇ ಸಂಕಷ್ಟ ಎದುರಾಯ್ತಾ ಎಂಬ ಸಂಶಯ ಮೂಡಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹೈಕಮಾಂಡ್ ಯಾರ ಮೇಲೆ ಒಲವು ತೋರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಸದ್ಯಕ್ಕೆ ಸಿಎಂ ಸ್ಥಾನ ಬದಲಾವಣೆ ತಣ್ಣಗಾಗಿದ್ದರೂ ಅಧಿವೇಶನ ಮುಗಿದ ಬಳಿಕ ಮತ್ತೆ ಭುಗಿಲೇಳುವ ಸಾಧ್ಯತೆಯಿದೆ.
ಇಂತಹ ಸಂದರ್ಭದಲ್ಲಿ ಉಭಯ ನಾಯಕರ ನಡೆಯ ಮೇಲೆ ಹೈಕಮಾಂಡ್ ಹದ್ದಿನಗಣ್ಣಿರಿಸಲಿದೆ. ಯಾವುದೇ ತಪ್ಪಾದರೂ ಸಂಕಷ್ಟ ತಪ್ಪಿದ್ದಲ್ಲ. ಆದರೆ ಈಗ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿ ಡಿಕೆಶಿ ಬಣದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದೇ ವಿಚಾರವನ್ನು ಡಿಕೆಶಿ ಬಣ ಹೈಕಮಾಂಡ್ ಮುಂದಿಡಲಿದೆ. ಆಗ ಸಿದ್ದರಾಮಯ್ಯ ತಕ್ಕಡಿ ಕೊಂಚ ಕೆಳಗೆ ಹೋಗಬಹುದು. ಡಿಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಈಗ ತಾಳ್ಮೆಯಿಂದಿದ್ದರೆ ಪುತ್ರ ಮಾಡಿರುವ ಎಡವಟ್ಟು ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಬಹುದು.