ಬೆಂಗಳೂರು: ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು ಎಂದಿದ್ದಕ್ಕೆ ವಿರೋಧಿಸಿದ್ದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆಎಸ್ ಈಶ್ವರಪ್ಪ ತಾಕತ್ತಿದ್ದರೆ ಕುರಾನ್, ಬೈಬಲ್ ಬಗ್ಗೆ ಇಂತಹ ಹೇಳಿಕೆ ನೀಡಲಿ ಎಂದಿದ್ದಾರೆ.
ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು ಎಂದಿದ್ದ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಕುಮಾರಸ್ವಾಮಿವರು ಬಿಜೆಪಿ ಸೇರಿಕೊಂಡ ಮೇಲೆ ಮನುವಾದಿಗಳಾಗಿದ್ದಾರೆ ಎಂದಿದ್ದರು.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಎಸ್ ಈಶ್ವರಪ್ಪ ಸ್ವತಃ ಮಹಾತ್ಮಾ ಗಾಂಧೀಜಿಯವರೇ ಭಗವದ್ಗೀತೆಯನ್ನು ಹೊಗಳಿದ್ದರು. ಆದರೆ ಸಿದ್ದರಾಮಯ್ಯ ಹೇಳಿಕೆ ಸೈದ್ಧಾಂತಿಕ ದಿವಾಳಿತನ ತೋರಿಸುತ್ತದೆ. ಯಾರೋ ಹೇಳಿಕೊಟ್ಟಿದ್ದನ್ನು ಕೇಳಿ ಕಮ್ಯುನಿಷ್ಟ್ ಸಿದ್ಧಾಂತವನ್ನು ತುಂಬಿಕೊಂಡಿರುವ ಅವರು ಒಮ್ಮೆ ಭಗವದ್ಗೀತೆಯನ್ನು ಓದಲಿ. ಇದು ಕೇವಲ ಹಿಂದೂಗಳು ಓದಬೇಕಾದ ಧರ್ಮಗ್ರಂಥವಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಬೈಬಲ್, ಕುರಾನ್ ಬಗ್ಗೆಯೂ ಇದೇ ರೀತಿ ಹೇಳಿಕೆ ನೀಡಲಿ. ನಂತರ ಅವರು ಅಧಿಕಾರಕ್ಕೇ ಬರಲ್ಲ. ಮತ ಬ್ಯಾಂಕ್ ಗಾಗಿ ಓಲೈಕೆ ರಾಜಕಾರಣ ಮಾಡುವುದನ್ನು ಬಿಟ್ಟು ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.