Publish Date: Tue, 11 Dec 2018 (15:22 IST)
Updated Date: Tue, 11 Dec 2018 (15:24 IST)
ಸತ್ಯಸಾಯಿ ಬಾಬಾಗೆ ನಮಿಸಿದ ಕಳ್ಳರು ಆತನ ಮುಂದಿದ್ದ ಹುಂಡಿಯನ್ನು ಕಳ್ಳತನ ಮಾಡಿ 5 ಲಕ್ಷಕ್ಕೂ ಅಧಿಕ ಹಣದೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ಸಾಯಿ ಬಾಬಾ ಮಂದಿರದ ಹಿಂಭಾಗದ ಕಡೆ ಗ್ರಿಲ್ ಮುರಿದು ಹುಂಡಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಹುಬ್ಬಳ್ಳಿಯ ರಾಜನಗರದಲ್ಲಿ ಈ ಘಟನೆ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ನಾಲ್ವರು ಕಳ್ಳರು ಒಳನುಗ್ಗಿ ಸಾಯಿಬಾಬಾ ಮೂರ್ತಿಯ ಎದುರು ಇದ್ದ ಹುಂಡಿ ಮತ್ತು ಕೌಂಟರ್‌ನ ಬೀಗ ಮುರಿದು ಅದರಲ್ಲಿದ್ದ ಐದು ಲಕ್ಷಕ್ಕೂ ಹೆಚ್ಚು ನಗದನ್ನು ದೋಚಿದ್ದಾರೆ.
ಇವರು ಕಳ್ಳತನ ಮಾಡುವ ಮುನ್ನ ಶಿರಡಿ ಸಾಯಿ ಬಾಬಾನ ಮೂರ್ತಿಗೆ ಒಬ್ಬ ಕೈ ಮುಗಿದು ಹುಂಡಿಯನ್ನು ಎತ್ತಲು ಪ್ರಯತ್ನಿಸಿದ್ದಾನೆ. ಕಳ್ಳರ ಕೈಚಳಕ ಹಾಗೂ ಸಂಪೂರ್ಣ ಚಲನವಲನ ಮಂದಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡಿಸೆಂಬರ್ 3 ರಂದು ನಸುಕಿನ ಎರಡು ಗಂಟೆಯಲ್ಲಿ ಈ ದರೋಡೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೇವಸ್ಥಾನದ ಸಮಿತಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.