ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ತಿಕ್ಕಾಟವಾಗುತ್ತಿದೆ. ಈ ನಡುವೆ ರಾಹುಲ್ ಗಾಂಧಿಗೆ ಇದೊಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ಹೆಚ್ಚು ಒಲವಿದೆಯಾ ಎಂಬ ಅನುಮಾನವಿದೆ.
ರಾಜ್ಯದ ಕುರ್ಚಿ ದಂಗಲ್ ಈಗ ದೆಹಲಿಗೆ ತಲುಪಿದೆ. ರಾಜ್ಯದ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ದೆಹಲಿಗೆ ಹೋಗಿರುವ ಮಲ್ಲಿಕಾರ್ಜುನ ಖರ್ಗೆ ಇಂದೇ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಅಚ್ಚರಿಯಿಲ್ಲ.
ನನ್ನ ಕೈಯಲ್ಲಿ ಏನೂ ಮಾಡಲು ಆಗುತ್ತಿಲ್ಲ ಎಂದು ಖರ್ಗೆ ಕೈಚೆಲ್ಲಿದ್ದರು. ಇದೀಗ ಕರ್ನಾಟಕ ಸಿಎಂ ಕದನವನ್ನು ರಾಹುಲ್ ಗಾಂಧಿ ಬಗೆಹರಿಸಲಿದ್ದಾರೆ. ಹೀಗಾಗಿ ರಾಹುಲ್ ಯಾರ ಪರ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕೆಲವು ತಿಂಗಳ ಹಿಂದೆಯೇ ಸಿದ್ದರಾಮಯ್ಯನವರಿಗೆ ನೀವು ಸಿಎಂ ಆಗಿ ಮುಂದುವರಿಯಿರಿ ಎಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನೀವು ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದೀರಿ. ನಿಮ್ಮ ನಾಯಕತ್ವದ ಅಗತ್ಯವಿದೆ ಎಂದು ರಾಹುಲ್ ಹೇಳಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ. ಹೀಗಾಗಿಯೇ ಸಿದ್ದು ಇಷ್ಟು ಆತ್ಮವಿಶ್ವಾಸದಿಂದ ನಾನೇ ಪೂರ್ಣಾವಧಿ ಸಿಎಂ ಎನ್ನುತ್ತಿರುವುದು ಎಂಬ ಗುಸು ಗುಸು ಕೇಳಿಬರುತ್ತಿದೆ.
ರಾಹುಲ್ ಗಾಂಧಿ ಎಲ್ಲೇ ಹೋದರೂ ತಮ್ಮ ಭಾಷಣಗಳಲ್ಲಿ ಅಹಿಂದ ಜನರನ್ನು ಟಾರ್ಗೆಟ್ ಮಾಡಿಯೇ ಮಾತನಾಡುತ್ತಾರೆ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗದವರ ಏಳಿಗೆಯಾಗಬೇಕು ಎನ್ನುತ್ತಿರುತ್ತಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈಗ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ಹೆಚ್ಚು ಒಲವಿದೆ ಎಂಬ ಮಾತುಗಳು ಕೇಳಿಬರುತ್ತಿದೆ.