ಲಕ್ನೋ: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದು ಡ್ರಮ್ ನಲ್ಲಿ ಶವ ತುಂಬಿಟ್ಟಿದ್ದ ಮುಸ್ಕಾನ್ ಎಂಬಾಕೆಯ ಪ್ರಕರಣ ಭಾರೀ ಸದ್ದು ಮಾಡಿತ್ತು. ಆಕೆಯ ಕತೆ ಈಗ ಏನಾಗಿದೆ ಗೊತ್ತಾ?
ಕೆಲವು ಸಮಯದ ಹಿಂದೆ ಮುಸ್ಕಾನ್ ತನ್ನ ಪತಿ ಸೌರಭ್ ರಜಪೂತ್ ನನ್ನು ಕೊಂದು ಪ್ರಿಯಕರನ ಜೊತೆ ಸೇರಿಕೊಂಡು ಡ್ರಮ್ ಒಂದರಲ್ಲಿ ಶವ ತುಂಬಿ ಮೇಲಿನಿಂದ ಸಿಮೆಂಟ್ ಹಾಕಿ ಖತರ್ನಾಕ್ ಕೃತ್ಯವೆಸಗಿದ್ದಳು. ಆಕೆಯ ಪ್ರಕರಣ ಬಯಲಿಗೆ ಬರುತ್ತಿದ್ದಂತೇ ಪೊಲೀಸರು ಬಂಧಿಸಿದ್ದರು.
ಆಗ ಮುಸ್ಕಾನ್ ಗರ್ಭಿಣಿಯಾಗಿದ್ದಳು. ಈಗ ಮುಸ್ಕಾನ್ ಮೀರತ್ ನ ಲಾಲ ಲಜಪತ್ ರಾಯ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದೆ. ಸೋಮವಾರ ಮುಸ್ಕಾನ್ ಗೆ ಹೆರಿಗೆಯಾಗಿದೆ.
ಗಂಡನ ಕೊಂದ ತಪ್ಪಿಗೆ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ನನ್ನು ಬಂಧಿಸಲಾಗಿತ್ತು. ಇಬ್ಬರೂ ಈಗ ಜೈಲಿನಲ್ಲಿದ್ದಾರೆ. ಮುಸ್ಕಾನ್ ಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಇದೀಗ ಆಕೆಯ ಕುಟುಂಬಸ್ಥರಿಗೆ ಮಗುವಿನ ಜನನದ ಸುದ್ದಿ ತಲುಪಿಸಲಾಗಿದೆ. ಆದರೆ ಮನೆಯವರು ಯಾರೂ ಆಕೆಯನ್ನು ನೋಡಲು ಬಂದಿಲ್ಲ. ಆಕೆ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದು, ವಾರ್ಡ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿದುಬಂದಿದೆ.