ನವದೆಹಲಿ: ರಾಹುಲ್ ಗಾಂಧಿ ದೇಶದಲ್ಲಿ ಪ್ರಮುಖ ವಿಚಾರಗಳಿರುವಾಗಲೇ ವಿದೇಶದಲ್ಲಿರುತ್ತಾರೆ. ಎಲ್ಲಿ ಹೋಗ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸೂರ್ಯಕಾಂತ್ ಪ್ರಮಾಣವಚನ ಕಾರ್ಯಕ್ರಮವಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ರಾಧಾಕೃಷ್ಣನ್ ಸೇರಿದಂತೆ ಸಾಂವಿಧಾನಿಕ ಪ್ರಮುಖ ಹುದ್ದೆಯಲ್ಲಿರುವ ಗಣ್ಯರು ಆಗಮಿಸಿದ್ದರು. ಲೋಕಸಭೆಯ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಗೂ ಆಹ್ವಾನವಿತ್ತು. ಆದರೆ ರಾಹುಲ್ ಗೈರಾಗಿದ್ದರು.
ಸದ್ಯಕ್ಕೆ ರಾಹುಲ್ ವಿದೇಶ ಪ್ರವಾಸದಲ್ಲಿರಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ. ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ. ಆದರೆ ಸಾಂವಿಧಾನಿಕ ಕಾರ್ಯಕ್ರಮಗಳಿದ್ದಾಗ ಅದಕ್ಕೆ ಗೈರಾಗುತ್ತಾರೆ. ರಾಹುಲ್ ಗಾಂಧಿ ಯಾವತ್ತೂ ಕಾಡಿನ ಸಫಾರಿ, ಪಾರ್ಟಿಗಳು ಮತ್ತು ವಿದೇಶೀ ಟೂರ್ ಗಳಲ್ಲೇ ಬ್ಯುಸಿಯಾಗಿರುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಕೂಡಾ ವ್ಯಂಗ್ಯ ಮಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಪ್ರಮಾಣವಚನಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗೈರಾಗುತ್ತಾರೆ. ಅವರೆಲ್ಲಿದ್ದಾರೆ ಯಾಕೆ ಇಂತಹ ಮುಖ್ಯ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಕರ್ನಾಟಕದಲ್ಲಿ ನೋಡಿದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಕುರ್ಚಿಗಾಗಿ ಫೈಟ್ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗಿದೆ. ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಎಲ್ಲದಕ್ಕೂ ರಾಹುಲ್ ಗಾಂಧಿ ಒಪ್ಪಿಗೆ ಬೇಕು. ಆದರೆ ರಾಹುಲ್ ಗಾಂಧಿಗೆ ಇಂತಹ ಸಂಕಷ್ಟಗಳ ಪರಿಹಾರಕ್ಕೆ ಮನಸ್ಸೇ ಇಲ್ಲ. ಇದರ ನಡುವೆ ಕರ್ನಾಟಕದ ಜನ ಬವಣೆ ಪಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.