ಚನ್ನಪಟ್ಟಣ: ನಾನು ಕಳೆದೊಂದು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷ ಸೇರಿ ಶಾಸಕನಾದವನು. ಪಕ್ಷದಲ್ಲಿ ನಾನಿನ್ನೂ ಒಂದು ವರ್ಷದ ಮಗುವಾಗಿದ್ದು, ನನಗೆ ಯಾವ ಬಣವೂ ಇಲ್ಲ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬದಲಾವಣೆ ಬಗ್ಗೆ ಶಾಸಕ ಸಿಪಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಸುದ್ದಿಗಾರರ ಜತೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾನಿನ್ನೂ ಒಂದು ವರ್ಷದ ಮಗುವಾಗಿದ್ದು, ನನಗೆ ಯಾವ ಬಣವೂ ಇಲ್ಲ. ನಾಯಕತ್ವ ಬದಲಾವಣೆ ಕುರಿತ ಚರ್ಚೆ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ನಮ್ಮ ನಾಯಕರೇ ಎಂದು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ನನ್ನನ್ನು ಇದಕ್ಕೆ ಎಳೆದು ತರಬೇಡಿ. ಈ ವಿಷಯದಲ್ಲಿ ಪಕ್ಷದ ನಾಯಕರು ಸಭೆ ಕರೆದು ಅಭಿಪ್ರಾಯ ಕೇಳಿದರೆ ಹೇಳುತ್ತೇನೆ ಎಂದರು.
ಸದ್ಯದ ಬೆಳವಣಿಗೆಗಳ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಗೊಂದಲವನ್ನು ಬಗೆಹರಿಸುವುದಾಗಿ ಅವರೇ ಹೇಳಿದ್ದಾರೆ. ಹಾಗಾಗಿ, ನಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು.