ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಸಂಘರ್ಷದೊಂದಿಗೆ ಕೈ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದರು.
ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧವಿಲ್ಲ, ಆದರೆ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರೆಯಲು ಡಿಕೆ ಶಿವಕುಮಾರ್‌ಗೆ ಇಷ್ಟವಿಲ್ಲ. ಒಟ್ಟು ಕಾಂಗ್ರೆಸ್‌ನೊಳಗೆ ಒಳಜಗಳವಿದೆ ಎಂದರು.
ಇನ್ನೂ ಜೈಲು ಪಾಲಾಗಿರುವ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ಪಪ್ಪಿ ಎಂದು ಕರೆಯಲ್ಪಡುವ ಕೆ.ಸಿ. ವೀರೇಂದ್ರ ಅವರನ್ನು ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿರುವುದು ನಾಚಿಗೇಡಿನ ಸಂಗತಿ ಎಂದು ಆಕ್ರೋಶ ಹೊರಹಾಕಿದರು.
ಶಕ್ತಿಪ್ರದರ್ಶನಕ್ಕಾಗಿ ಎರಡೂ ಬಣಗಳ ನಡುವೆ ಶಾಸಕರ ಖರೀದಿ ಪ್ರಯತ್ನ ನಡೆಯುತ್ತಿದೆ. ಶಾಸಕರ ಬೆಂಬಲ ಪಡೆಯಲು ಮತ್ತು ಅವರಿಗೆ ಹಣ ಪಾವತಿಸಲು ಶಿವಕುಮಾರ್ ಜೈಲಿಗೆ ಹೋಗಿರುವುದನ್ನು ನೀವು ನೋಡಿರಬಹುದು ಎಂದು ವಾಗ್ದಾಳಿ ನಡೆಸಿದರು.