ಬೆಂಗಳೂರು: ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆ ನಡೆಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದ ಪ್ರತಿಗಳನ್ನು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ,
ಕರ್ನಾಟಕದಲ್ಲಿ ಮೆಕ್ಕೆ ಜೋಳ ಮತ್ತು ಹೆಸರುಕಾಳು (ಮೂಂಗ್) ಬೆಳೆಯ ಬೆಲೆಗಳ ತೀವ್ರ ಕುಸಿತದ ಬಗ್ಗೆ ಗಾಢ ಆತಂಕ ಮತ್ತು ತುರ್ತು ಗಮನ ಹರಿಸುವ ಉದ್ದೇಶದಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ಇವು ಲಕ್ಷಾಂತರ ರೈತರ ಜೀವನಕ್ಕೆ ಆಧಾರವಾಗಿರುವ ಬೆಳೆಗಳಾಗಿವೆ. ಭಾರತ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ (MSP) ಗಣನೀಯವಾಗಿ ಕಡಿಮೆಯಾದ ಮಾರುಕಟ್ಟೆ ಬೆಲೆಗಳು ರೈತರಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿವೆ.
ಈ ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆ ಜೋಳ ಹಾಗೂ ಹೆಸರುಕಾಳನ್ನು 4.16 ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದ್ದು, ರಾಜ್ಯದಲ್ಲಿ ಸುಮಾರು 54.74 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಮೆಕ್ಕೆ ಜೋಳ ಮತ್ತು ಹೆಸರುಕಾಳು 1.983 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಸಮೃದ್ಧಿಯ ಅವಕಾಶವಾಗಬೇಕಿತ್ತು, ಆದರೆ ಪ್ರಸ್ತುತ ಮಾರುಕಟ್ಟೆ ಸ್ಥಿತಿಯು ಇದನ್ನು ಸಂಕಷ್ಟವನ್ನಾಗಿ ಪರಿವರ್ತಿಸಿದೆ.
ಕೇಂದ್ರ ಸರ್ಕಾರವು ಮೆಕ್ಕೆ ಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ₹2,400 ಹಾಗೂ ಹೆಸರುಕಾಳಿಗೆ ₹8,768 ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದರೂ, ಕರ್ನಾಟಕದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆ ಜೋಳಕ್ಕೆ ₹1600-1800 ಮತ್ತು ಹೆಸರುಕಾಳಿಗೆ ₹5,400 ಆಸುಪಾಸಿನಲ್ಲಿರುವುದು ತೀವ್ರ ಮತ್ತು ಹಿಂದೆಂದೂ ಕಾಣದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಹಿಂದಿನ ಮೂರು ವರ್ಷಗಳ ಮಾದರಿ ಬೆಲೆಗಳು ಎಂಎಸ್‌ಪಿ ಗಿಂತ ಹೆಚ್ಚಿರುವಾಗ, ಈ ವರ್ಷ ಬಾಹ್ಯ ಒತ್ತಡಗಳ ಪರಿಣಾಮ ಮತ್ತು ಸರಬರಾಜು-ಬೇಡಿಕೆಗಳ ಅಸಮತೋಲನದಿಂದ ಬೆಲೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ.
ಕರ್ನಾಟಕದಲ್ಲಿ ಸುಮಾರು 32 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದು, ಸ್ಥಳೀಯ ಕೈಗಾರಿಕೆಗಳ ಬಳಕೆಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಾಗಿದೆ. ಆದ್ದರಿಂದ ಭಾರತ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ:
1. NAFED, FCI ಮತ್ತು NCCF ಗೆ ತಕ್ಷಣ ಎಂಎಸ್‌ಪಿ ದರದಲ್ಲಿ ಖರೀದಿ ಆರಂಭಿಸಲು ನಿರ್ದೇಶನ ನೀಡಬೇಕು
ಕರ್ನಾಟಕದಲ್ಲಿ ಮೆಕ್ಕೆ ಜೋಳವನ್ನು PDS ವಿತರಣೆಯಲ್ಲಿ ಸೇರಿಸದಿರುವುದರಿಂದ, FCI, NAFED ಹಾಗೂ ಇತರ ಖರೀದಿ ಸಂಸ್ಥೆಗಳು ತಕ್ಷಣ ಬೆಲೆ ಬೆಂಬಲ ಯೋಜನೆ ಅಥವಾ ಸೂಕ್ತ ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ಮೆಕ್ಕೆ ಜೋಳ ಮತ್ತು ಹೆಸರುಕಾಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಆದೇಶಿಸಬೇಕು.
2. ಎಥೆನಾಲ್ ಪೂರೈಕೆಯ ಇಡಿ ವ್ಯವಸ್ಥೆಯಲ್ಲಿ ಕರ್ನಾಟಕದ ರೈತರ ನ್ಯಾಯಯುತ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿ
ಮೆಕ್ಕೆ ಜೋಳದಿಂದ ಉತ್ಪಾದಿತ ಎಥೆನಾಲ್‌ಗೆ ಮೂಲ ದರ ಲೀಟರ್‌ಗೆ ₹66.07 ಇದ್ದು, ಮೆಕ್ಕೆ ಜೋಳದಿಂದ ಪಡೆದ ಎಥೆನಾಲ್‌ಗೆ ಲೀಟರ್‌ಗೆ ₹5.79 (GST ಹೊರತುಪಡಿಸಿ) ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಆದರೆ ಕರ್ನಾಟಕದ ಅನೇಕ ಎಥೆನಾಲ್ ಘಟಕಗಳು ರೈತರನ್ನು ಬಿಟ್ಟು ಮಧ್ಯವರ್ತಿಗಳಿಂದ ಮತ್ತು ವ್ಯಾಪಾರಿಗಳಿಂದ ಮೆಕ್ಕೆ ಜೋಳ ಖರೀದಿಸುತ್ತಿವೆ. ಇದು ಎಂಎಸ್‌ಪಿ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಉದ್ದೇಶವನ್ನೇ ವಿಫಲಗೊಳಿಸುತ್ತದೆ.
ಎಥೆನಾಲ್ ಘಟಕಗಳು ರೈತರಿಂದ ಅಥವಾ ರೈತ ಉತ್ಪಾದಕ ಸಂಘಗಳಿಂದ (FPO) ನೇರವಾಗಿ ಮೆಕ್ಕೆ ಜೋಳ ಖರೀದಿಸುವಂತೆ ಕೇಂದ್ರ ಸರ್ಕಾರವು ಆದೇಶಿಸಬೇಕು. ನೇರ ಖರೀದಿ ಖಾತ್ರಿಗೊಳ್ಳದಿದ್ದಲ್ಲಿ, ರೈತರಿಗೆ ಪ್ರೋತ್ಸಾಹಧನ ತಲುಪದಿದ್ದ ಪಕ್ಷದಲ್ಲಿ ಎಥೆನಾಲ್ ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಮರುಪರಿಶೀಲಿಸಬೇಕು.