ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಜಟಾಪಟಿ ನಡೆಯುತ್ತಿರುವಾಗ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಈಗ ದೊಡ್ಡ ತಲೆನೋವು ಎದುರಾಗಿದೆ.
ಡಿಕೆ ಶಿವಕುಮಾರ್ ಗೆ ಅವಕಾಶ ಕೊಡಬೇಕು ಎಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಈ ಬಾರಿ ಸ್ವತಃ ಡಿಕೆಶಿಯೇ ಒಂದು ಹೆಜ್ಜೆ ಮುಂದೆ ಹೋಗಿದ್ದು ತಮ್ಮ ಬೆಂಬಲಿಗರ ಜೊತೆ ನಿಂತಿದ್ದಾರೆ ಎನ್ನಲಾಗಿದೆ. ನಿನ್ನೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಮತ್ತು ವೀರೇಂದ್ರ ಪಪ್ಪಿ ಜೊತೆಗೂ ಮಾತುಕತೆ ನಡೆಸಿ ಬಂದಿದ್ದಾರೆ.
ಈ ನಡುವೆ ಕುರ್ಚಿ ಗಲಾಟೆ ಶಮನ ಮಾಡಲು ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯನವರು ಖರ್ಗೆಯವರನ್ನು ಭೇಟಿ ಮಾಡಿ ಗೊಂದಲ ನಿವಾರಿಸುವಂತೆ ಕೇಳಿಕೊಳ್ಳಲಿದ್ದಾರೆ. ಖರ್ಗೆ ಭೇಟಿಯಾಗುತ್ತಿರುವ ವಿಚಾರವನ್ನು ಸ್ವತಃ ಸಿದ್ದರಾಮಯ್ಯನವರೇ ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಇಂದು ಡಿಕೆ ಶಿವಕುಮಾರ್ ಕೂಡಾ ಪ್ರತ್ಯೇಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್ ಗೆ ಈ ಇಬ್ಬರೂ ನಾಯಕರನ್ನೂ ಎದುರು ಹಾಕಿಕೊಂಡರೆ ಕಷ್ಟ. ಹೀಗಾಗಿ ಬೆಣ್ಣೆಯಿಂದ ಕೂದಲು ತೆಗೆದಂತೆ ನಾಜೂಕಾಗಿ ಗೊಂದಲ ನಿವಾರಿಸುವ ತಲೆನೋವು ಮಲ್ಲಿಕಾರ್ಜುನ ಖರ್ಗೆಯವರದ್ದಾಗಿದೆ.