ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕುರ್ಚಿ ಫೈಟ್ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಹಳೇ ವಿಚಾರವೊಂದು ವೈರಲ್ ಆಗ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ ಎಂದು ಸುದ್ದಿ. ಆದರೆ ಸಿದ್ದರಾಮಯ್ಯನವರು ಅಷ್ಟು ಬೇಗ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ. ಇದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರದಿಲ್ಲ.
ಇದರ ನಡುವೆ ಬಿಎಸ್ ಯಡಿಯೂರಪ್ಪನವರ ಅಭಿಮಾನಿಗಳು ಅವರ ರಾಜೀನಾಮೆ ವಿಚಾರವನ್ನು ವೈರಲ್ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವಯಸ್ಸಾಯ್ತು ಎಂದು ಹೊಸಬರಿಗೆ ದಾರಿ ಮಾಡಿಕೊಡಲು ಹೈಕಮಾಂಡ್ ಮುಂದಾಗಿತ್ತು. ಹೀಗಾಗಿ ಬಿಜೆಪಿ ಹೈಕಮಾಂಡ್ ಹೇಳಿದ ಬೆನ್ನಲ್ಲೇ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದೇ ವಿಚಾರವನ್ನು ಅವರ ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಕೂಡಾ ರಾಜೀನಾಮೆ ಕೊಡಿ ಎಂದರೆ ಕೊಡಲು ಹಿಂದೆ ಮುಂದೆ ನೋಡ್ತಾರೆ. ಅಂತಹದ್ದರಲ್ಲಿ ಬಿಎಸ್ ವೈ ಪಕ್ಷದ ವರಿಷ್ಠರು ಹೇಳಿದ್ದರೆಂದು ಮುಖ್ಯಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ ತ್ಯಾಗಮಯಿ. ಅವರ ಪಕ್ಷ ನಿಷ್ಠೆ, ಹೈಕಮಾಂಡ್ ಮೇಲಿನ ಗೌರವ ಎಲ್ಲರಿಗೂ ಬಾರದು. ಪಕ್ಷಕ್ಕಾಗಿ ಸಿಎಂ ಹುದ್ದೆಯನ್ನೇ ಬಿಟ್ಟುಕೊಡುವ ಉದಾರತೆ ಎಲ್ಲರಿಗೂ ಇರಲ್ಲ ಎಂದು ಸಿದ್ದರಾಮಯ್ಯಗೆ ಬಿಎಸ್ ವೈ ಅಭಿಮಾನಿಗಳು ಪರೋಕ್ಷವಾಗಿ ಟಾಂಗ್ ನೀಡುತ್ತಿದ್ದಾರೆ.