ಲಕ್ನೋ: ಧಾರ್ಮಿಕ ಪವಿತ್ರ ಕೇಂದ್ರ ಅಯೋಧ್ಯೆಯಲ್ಲಿ ಮಂಗಳವಾರ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ. ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯಾಹ್ನ ಸುಮಾರು 11:52ರಿಂದ 12:35ರ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. 191 ಅಡಿ ಎತ್ತರದ ರಾಮ ಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲಾಗುತ್ತಿದೆ.
ಧ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲಾಗಿದೆ. ಈ ದೈವಿಕ ಧ್ವಜವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ತಯಾರಿಸಲಾಗಿದೆ. ಧಾರ್ಮಿಕ ಮಹತ್ವವುಳ್ಳ ವಿಶಿಷ್ಟವಾದ ಮರದ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಲಾಗಿದೆ
ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಭಾರತದ ವಿವಿಧೆಡೆಯ ಆರು ಸಾವಿರ ಪ್ರಮುಖ ಗಣ್ಯರು ಭಾಗವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಭಾರಿ ಸಿದ್ದತೆ ನಡೆದಿದೆ.
ಭದ್ರತೆಯ ದೃಷ್ಠಿಯಿಂದ ಸೋಮವಾರದಿಂದ ಬುಧವಾರದವರೆಗೂ ದರ್ಶನಕ್ಕೆ ನಿರ್ಬಂಧ ವಿಧಿಸಿದೆ. ಇನ್ನು ಇಡೀ ಅಯೋಧ್ಯೆಯನ್ನು ಮಧುವಣಗಿತ್ತಿಯಂತೆ ಸಿದ್ಧಗೊಳಿಸಲಾಗಿದೆ.