ಬೆಂಗಳೂರು: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರ್ಕಾರವು ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಅವರು ಮೋದಿಗೆ ಅವರಿಗೆ ಪತ್ರ ಬರೆದು ಅವರ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಿದರು. ಹಿಂದೆ ಒಮ್ಮೆ ವಿಧಾನಸಭೆಯಲ್ಲಿ ಇದೇ ಸಿಎಂ, ಡಿಸಿಎಂ ಸೇವಂತಿಗೆ ಹೂವನ್ನು ಕಿವಿ ಮೇಲೆ ಇಟ್ಟುಕೊಂಡು ಬಂದಿದ್ದರು. ಅಂದು ಕಿವಿಗೆ ಹೂ ಇಟ್ಟುಕೊಂಡಿದ್ದ ಇವರು, ಇಂದು ಎರಡೂವರೆ ವರ್ಷದಲ್ಲಿ ನಿತ್ಯವೂ ಜನರ ಕಿವಿಗೆ ಹೂ ಮುಡಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಅವರು ಕಬ್ಬಿಗೆ ಎಫ್‌ಆರ್‌ಪಿ ದರ ಎಂದು ಟನ್‌ಗೆ ₹3,550 ನಿಗದಿ ಮಾಡಿದ್ದಾರೆ. ಆದರೆ ಶುಕ್ರವಾರದ ದಿನ ಸಿಎಂ, ಡಿಸಿಎಂ ಮ್ಯಾರಾಥಾನ್ ಸಭೆ ಮಾಡಿದರು. ದಿನಪೂರ್ತಿ ಸಭೆ ನಡೆಸಿ ₹100 ಮಾತ್ರ ಜಾಸ್ತಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ₹3550 ಎಫ್‌ಆರ್‌ಪಿ ನಿಗದಿ ಮಾಡಿದೆ. ರೈತರು ಕೇಳಿದ್ದು ₹3500 ಬೆಲೆಯನ್ನು. ಸರ್ಕಾರ ಮ್ಯಾರಥಾನ್ ಸಭೆ ಮಾಡಿ ಕೊಟ್ಟಿದ್ದು ₹3,300 ಮಾತ್ರ. ಹಾಗಾದರೆ ಇವರು ರೈತರಿಗೆ ಕೊಟ್ಟಿದ್ದೇನು? ಸರ್ಕಾರ ಮಾಡಿರುವ ಮೋಸವನ್ನು ಪ್ರಶ್ನೆ ಮಾಡದೇ ರೈತರು ಸಂತೋಷಪಟ್ಟರೆ ನನ್ನದೇನು ಅಭ್ಯಂತರ ಇಲ್ಲ. ಆದರೆ, ಸರ್ಕಾರ ರೈತ ಕುಟುಂಬಗಳಿಗೆ ದೋಖಾ ಮಾಡಿದೆ ಎಂದು ದೂರಿದರು.