Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳು: ಆರ್.ಅಶೋಕ್ ಟೀಕೆ

R Ashok

Krishnaveni K

ಬೆಂಗಳೂರು , ಶುಕ್ರವಾರ, 21 ನವೆಂಬರ್ 2025 (15:38 IST)
Photo Credit: X
ಬೆಂಗಳೂರು: ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ‘ವರ್ಷ ಎರಡುವರೆ ಕನ್ನಡಿಗರಿಗೆ ಬಲು ಹೊರೆ’ ‘ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ’ ಕುರಿತ ವಿಡಿಯೋ ಬಿಡುಗಡೆ ಮಾಡಿದ ಬಳಿಕ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಇದೇವೇಳೆ ಸರಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಡಿ.ಕೆ.ಶಿವಕುಮಾರ್ ಅವರು ಕಾಯಿಲೆ ಬಿದ್ದು ಸೊರಗಿ ಡ್ರಿಪ್ ಹಾಕಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಹೋದವರಿಗೆ ‘ಕ್ಯಾಬಿನೆಟ್‍ನಿಂದ ವಜಾ ಮಾಡುವುದಾಗಿ’ ಬೆದರಿಕೆ ಹಾಕಿದ್ದಾರೆ. ಶಾಸಕರ ನಿಧಿ ಕೊಡುವುದಿಲ್ಲ ಎಂದು ಧಮ್ಕಿ ಹಾಕಿರುವುದು ಕೂಡ ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ವಿವರಿಸಿದರು.

ಒಂದು ಕಡೆ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಎನ್ನುತ್ತಾರೆ. ಇನ್ನೊಂದೆಡೆ ಸಿದ್ದರಾಮಯ್ಯನವರು ದೆಹಲಿಗೆ ಯಾಕೆ ಹೋದೆ ಎಂದು ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಎರಡುವರೆ ವರ್ಷದ ಓಳು ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳುವ ಪರಿಸ್ಥಿತಿ ತಂದಿದ್ದಾರೆ ಎಂದು ಆರೋಪಿಸಿದರು.

ವರೆ ವರ್ಷ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ತಿ ವರಿ ತಂದಿದೆ. ರಾಜ್ಯದ ಜನರ ಪಾಲಿಗೆ ಇದು ಬೆಲೆ ಏರಿಕೆಯ ಹೊರೆ, ಜನರಿಗೆ ಬರೆ ಎಂದು ಆಕ್ಷೇಪಿಸಿದರು. ಜಿಎಸ್‍ಟಿಯನ್ನು ನರೇಂದ್ರ ಮೋದಿಜೀ ಅವರು ಕಡಿಮೆ ಮಾಡಿ, ತುಪ್ಪ ತಿನ್ರಪ್ಪ, ಆರೋಗ್ಯ ಒಳ್ಳೆಯದಾಗಲೆಂದು ಜಿಎಸ್‍ಟಿ ಪ್ರಮಾಣ ಕಡಿಮೆ ಮಾಡಿದ್ದರು. ಕಾಂಗ್ರೆಸ್ಸಿನವರು ಆ ತುಪ್ಪದ ಮೇಲೂ ದರ ಏರಿಸಿದ್ದಾರೆ ಎಂದು ಆರ್.ಅಶೋಕ ಅವರು ದೂರಿದರು. ತುಪ್ಪಕ್ಕೂ ಕಲ್ಲು ಹಾಕಿದ ಪಾಪಿ ಸರಕಾರ ಇದೆಂದು ಆರೋಪಿಸಿದರು.

25 ವಸ್ತುಗಳ ಬೆಲೆ ಏರಿಸಿದ್ದಾರೆ. ವಿದ್ಯುತ್, ಹಾಲು ದರ, ನೋಂದಣಿ ಶುಲ್ಕ, ಪೆಟ್ರೋಲ್, ಡೀಸೆಲ್, ಅಬಕಾರಿ ಸೇರಿ- ಏನೇನಿದೆಯೋ ಅದೆಲ್ಲವೂ ದುಬಾರಿಯಾಗಿದೆ. ಒಂದೇ ವರ್ಷದಲ್ಲಿ ಇಷ್ಟು ಬೆಲೆ ಏರಿಸಿದ ನಂಬರ್ 1 ಪಾಪಿ ಸರಕಾರ ಇದೆಂದು ಆಕ್ಷೇಪಿಸಿದರು. ಇವತ್ತಿನವರೆಗೂ ಅತಿ ಹೆಚ್ಚು ಸಾಲ (2 ಲಕ್ಷ ಕೋಟಿಗೂ ಹೆಚ್ಚು) ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದರು. ಇವರು ಬೆಲೆ ಏರಿಕೆ, ಅಕ್ರಮ, ಹಗರಣಗಳ, ಸಾಲ ಮಾಡುವುದರಲ್ಲಿ ಚಾಂಪಿಯನ್ ಎಂದು ಟೀಕಿಸಿದರು.

ರೈತರನ್ನು ಸಾಯಿಸುವುದರಲ್ಲಿ ಇವರು ಚಾಂಪಿಯನ್, ಗುತ್ತಿಗೆದಾರರ ಆತ್ಮಹತ್ಯೆಯಲ್ಲಿ ಚಾಂಪಿಯನ್, ಜಾತಿಗಳ ನಡುವೆ ಬೆಂಕಿ ಹಚ್ಚುವುದರಲ್ಲಿ ಚಾಂಪಿಯನ್, ದೆಹಲಿಗೆ ಗರಿಷ್ಠ ಹಣ ಕಳಿಸುವುದರಲ್ಲೂ ಇವರೇ ಚಾಂಪಿಯನ್- ಈ ಥರ ಎರಡೂವರೆ ವರ್ಷದಲ್ಲಿ ನೀವು ಚಾಂಪಿಯನ್ ಆಗಿದ್ದೀರಿ ಎಂದು ವ್ಯಂಗ್ಯವಾಗಿ ನುಡಿದರು.

ನಿಮ್ಮನ್ನು ಸಿಎಂ ಆಗಿ ಆಯ್ಕೆ ಮಾಡಿದ ಶಾಸಕರೇ ನೀವು ಬೇಡ ಎಂದು ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ. ಇಷ್ಟಿದ್ದರೂ ಕ್ರಾಂತಿ- ಭ್ರಾಂತಿ ಇಲ್ಲವೆಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಟೀಕಿಸಿದರು. ಶಾಸಕರು ಖರ್ಗೆ ಮನೆಗೆ ವಾಂತಿ ಮಾಡಲು ಹೋಗಿದ್ದರೇ ಎಂದು ಕೇಳಿದರು.

ಸಿಎಂ ಬದಲಾವಣೆ ಕಾಂಗ್ರೆಸ್ಸಿನ ಆಂತರಿಕ ವಿಚಾರ. ಎರಡುವರೆ ವರ್ಷದ ಒಪ್ಪಂದ ಆಗಿದೆಯೇ ಇಲ್ಲವೇ ಬೊಗಳಿ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ. ನಾನು ಇದನ್ನು ಕೇಳುತ್ತಿಲ್ಲ ಎಂದು ಆರ್.ಅಶೋಕ ಅವರು ಪ್ರಶ್ನಿಸಿದರು.

ದೊಡ್ಡ ಖರ್ಗೆ, ರಾಹುಲ್ ಗಾಂಧಿಯವರು 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಲಿ. ಅವರೂ ಹೇಳುತ್ತಿಲ್ಲ; ಇವರೂ ಹೇಳುತ್ತಿಲ್ಲ. ಸಿದ್ದರಾಮಯ್ಯ- ಡಿಕೆ ಬಳಿ ಕೇಳಿದರೆ 4 ಗೋಡೆ ಮಧ್ಯೆ ಎನ್ನುತ್ತಾರೆ. 4 ಗೋಡೆ ಮಧ್ಯೆ ಏನಾಗಿದೆ ಎಂದು ಜನರಿಗೆ ತಿಳಿಸಿ ಎಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ