ಬೆಂಗಳೂರು: ದರೋಡೆ ಮಾಡುವವರಿಗೆ ಕರ್ನಾಟಕ ಒಂದು ರೀತಿ ಸ್ವರ್ಗವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರಿನ ಮತ್ತೊಂದು ಅವತಾರ ಬೆಂಗಳೂರು ದರೋಡೆಗಳ ನಗರ ಆಗುತ್ತಿದೆ. ಬೆಂಗಳೂರಿನಲ್ಲಿ 7 ನಿಮಿಷದಲ್ಲಿ 7 ಕೋಟಿ ಮೊತ್ತದ ದರೋಡೆ ನಡೆದಿದೆ ಎಂದು ಟೀಕಿಸಿದರು.
ಇದು ಕರ್ನಾಟಕ ಸರಕಾರದ ಹೊಸ ಸ್ಕೀಂ; ಇದು 5 ಗ್ಯಾರಂಟಿಗಳಂತಿದೆ. 7 ನಿಮಿಷದಲ್ಲಿ 7 ಕೋಟಿ ಪಡೆಯುವುದು ಹೇಗೆಂದು ಸರಕಾರವು ಜನರಿಗೆ ತೋರಿಸಿದೆ. ಜನರು ಭಯಭೀತರಾಗಿದ್ದು, ಬ್ಯಾಂಕ್‍ಗಳ ಬಳಿ ಹೋಗಲು ಆತಂಕದಿಂದಿರುವಂಥ ಪರಿಸ್ಥಿತಿ ಬಂದಿದೆ ಎಂದರು.
ಹಾಡಹಗಲಲ್ಲೇ ಇದು ಸಾಧ್ಯವೇ ಎಂದ ಅವರು, ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿ.ಸಿ.ಟಿವಿ ಕ್ಯಾಮೆರಾಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಜನ ಪೊಲೀಸರಿದ್ದಾರೆ. ಕಮೀಷನರ್ ಕಚೇರಿ, ಮನೆ, ಡಿ.ಜಿ. ಕಚೇರಿ, ಮನೆ ಇಲ್ಲೇ ಇದೆ. ಮುಖ್ಯಮಂತ್ರಿಗಳ ಮನೆ, ಸ್ಪೆಷಲ್ ವ್ಯಕ್ತಿ, ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮನೆ ಕೂಡ ಇಲ್ಲೇ ಇದೆ. ಒಂದು ಕಡೆ ಕಾಂಗ್ರೆಸ್ಸಿನವರ ಹಗಲುದರೋಡೆ, ಇಲ್ಲಿ ಡಕಾಯಿತರಿಂದ ರೋಡಲ್ಲೇ ಹಗಲು ದರೋಡೆ. ಇದು ಕಾಕತಾಳೀಯ ಎಂಬಂತಿದೆ ಎಂದು ನುಡಿದರು.
ಡಿ.ಕೆ.ಶಿವಕುಮಾರ್ ಟನೆಲ್ ರಸ್ತೆಯ ಪಾಯಿಂಟ್‍ನಲ್ಲೇ ಇದಾಗಿದೆ. ಅದೂ ಕಾಕತಾಳೀಯ ಅನಿಸುತ್ತದೆ. ದರೋಡೆ ಮಾಡುವವರಿಗೆ ಕರ್ನಾಟಕ ಒಂದು ರೀತಿ ಸ್ವರ್ಗವಾಗಿದೆ. ಬೀದರ್, ಮಂಗಳೂರು ಬಳಿಕ ಈಗ ಬೆಂಗಳೂರಿಗೆ ಬಂದಿದೆ. ಅಲ್ಲಿ ಕೈಚಳಕ ತೋರಿಸುವುದೇನು? ಎಂಬಂತೆ ರಾಜಧಾನಿ ಬೆಂಗಳೂರಿನಲ್ಲಿ ಕೈಚಳಕ ತೋರಿಸಿದ್ದಾರೆ. ಸರಕಾರ ಸತ್ತು ಹೋಗಿದೆ ಎಂದು ಜನರು ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ಸರಕಾರ, ಪೊಲೀಸರ ಭಯ ಇದ್ದಿದ್ದರೆ, ದರೋಡೆ ಮಾಡಿದರೆ ಗುಂಡು ಹಾಕುವ, ಶಿಕ್ಷೆಯ ಭಯ ಇದ್ದಲ್ಲಿ ಹೀಗೆ ಮಾಡುತ್ತಿರಲಿಲ್ಲ ಎಂದು ವಿಶ್ಲೇಷಿಸಿದರು. ಕುರ್ಚಿ ಗಲಾಟೆಗಾಗಿ ಮಂತ್ರಿಗಳು, ಮುಖ್ಯಮಂತ್ರಿ ಎಲ್ಲರೂ ದೆಹಲಿ ಕಡೆ ಮುಖ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟಿದೆ; ಸತ್ತು ಹೋಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
24 ಗಂಟೆಯಲ್ಲಿ ಬಂಧಿಸಬೇಕು; ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ. ಆಗಲೇ ದರೋಡೆ ಆಗಿ 24 ಗಂಟೆ ಮುಗಿದು 26 ಗಂಟೆ ಆಗಿದೆ. ಸುಳಿವೆಲ್ಲ ಸಿಕ್ಕಿದ್ದರೆ ಯಾಕೆ ಬಂಧಿಸಿಲ್ಲ ಎಂದು ಕೇಳಿದರು.