ಬೆಂಗಳೂರು: ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ನಡೆಸಿದ ದರೋಡೆಗೆ ವೆಬ್ ಸೀರೀಸ್ ಸ್ಪೂರ್ತಿಯೇ ಎಂಬ ಅನುಮಾನ ಮೂಡಿದೆ.
ಎಟಿಎಂಗಳಿಗೆ ಹಣ ಪೂರೈಸುತ್ತಿದ್ದ ವಾಹನವನ್ನು ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿದ್ದ ದರೋಡೆಕೋರರು ಬರೋಬ್ಬರಿ 7 ಕೋಟಿ ರೂ. 11 ಲಕ್ಷ ರೂ. ದೋಚಿದ್ದರು. ಭಾರತ ಸರ್ಕಾರ ಎಂಬ ಬರಹವಿದ್ದ ಇನ್ನೋವಾ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಇವರ ಯೋಜನೆ ನೋಡಿದರೆ ವೆಬ್ ಸೀರೀಸ್ ಒಂದರ ಪ್ರೇರಣೆಯಿಂದ ಮಾಡಿದ್ದಾರಾ ಎಂಬ ಅನುಮಾನ ಪೊಲೀಸರಿಗಿದೆ.
ಸಿಎಂಎಸ್ ವಾಹನವನ್ನು ದರೋಡೆಕೋರರು ಮೂರು ಸರಹದ್ದಿನ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗಡಿಯಲ್ಲಿ ಬಿಟ್ಟು ಹೋಗಿದ್ದರು. ಇದರಿಂದ ಯಾವ ಠಾಣೆ ಪೊಲೀಸರು ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂದು ಗೊಂದಲವಾಗಿತ್ತು. ಈ ರೀತಿ ಗೊಂದಲವುಂಟು ಮಾಡುವುದೇ ದರೋಡೆಕೋರರ ಉದ್ದೇಶವಾಗಿತ್ತು ಎನ್ನಲಾಗಿದೆ.
ಇದೆಲ್ಲವೂ ದರೋಡೆಕೋರರು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಮಾಡಿರುವ ಕೃತ್ಯವೆಂಬುದನ್ನು ಸಾಬೀತುಪಡಿಸುತ್ತದೆ. ಈ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದು 20 ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ನೆರೆಯ ತಮಿಳುನಾಡಿಗೆ ದರೋಡೆಕೋರರು ತಪ್ಪಿಸಿಕೊಂಡು ಓಡಿ ಹೋಗಿರುವ ಶಂಕೆಯಿದ್ದು ಅಲ್ಲೂ ತನಿಖೆ ನಡೆಸಲಾಗುತ್ತಿದೆ.