ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಈ ಮೊದಲು ಕಟ್ಟಾ ಬಿಜೆಪಿ ಕ್ಷೇತ್ರವಾಗಿತ್ತು. ಆದರೆ ಈಗ ಬಿಜೆಪಿಯಿಂದಲೇ ಕಾಂಗ್ರೆಸ್ ಸೇರ್ಪಡೆಯಾದ ಶಾಸಕ ಅಶೋಕ್ ರೈ ಇಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪುತ್ತೂರಿಗೆ ಭೇಟಿ ನೀಡಿದ್ದಾರೆ.
ಬಿಜೆಪಿ ಘಟಾನುಘಟಿ ನಾಯಕರು ಪುತ್ತೂರಿಗೆ ಭೇಟಿ ನೀಡಿದ್ದು ಅಪರೂಪ. ಕೇವಲ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಂದು ಹೋಗಿರಬಹುದು. ಆದರೆ ಇದೀಗ ಬಿವೈ ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್, ಡಿವಿ ಸದಾನಂದ ಗೌಡ ಜೊತೆಗೂಡಿ ಪುತ್ತೂರಿನಲ್ಲಿ ರೌಂಡ್ ಹಾಕಿದ್ದಾರೆ. ಮಹತೋಭಾರ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ವಿಜಯೇಂದ್ರ ಅವರ ಪುತ್ತೂರು ರೌಂಡ್ಸ್ ಈಗ ಸ್ಥಳೀಯರಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಇಲ್ಲಿನ ಜನರ ಬೆಂಬಲವಿದ್ದರೂ ಅವರಿಗೆ ಟಿಕೆಟ್ ನೀಡಿರಲಿಲ್ಲ. ಇದರಿಂದಾಗಿ ಲಾಭವಾಗಿದ್ದು ಈ ಹಿಂದೆ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ ಸೇರಿರುವ ಅಶೋಕ್ ರೈಗೆ. ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದರು.
ಅಷ್ಟೇ ಅಲ್ಲ, ಕಾಂಗ್ರೆಸ್ ನಲ್ಲಿದ್ದರೂ ಅಶೋಕ್ ರೈ ಹಿಂದೂ ಪರ ಇದ್ದಾರೆ. ಹೀಗಾಗಿ ಅವರಿಗೆ ಇಲ್ಲಿನ ಜನ ಪಕ್ಷಕ್ಕಿಂತ ವ್ಯಕ್ತಿ ನೋಡಿ ಮಣೆ ಹಾಕುತ್ತಿದ್ದಾರೆ. ಅದಕ್ಕೆ ತಕ್ಕ ಹಾಗೆ ಅಶೋಕ್ ರೈ ಕೆಲಸ ಮಾಡಿಕೊಡ್ತಾರೆ ಎಂಬ ಭರವಸೆಯೂ ಜನರಿಗೆ ಸಿಕ್ಕಿದೆ. ಹೀಗಾಗಿ ಮುಂದಿನ ಬಾರಿಯೂ ಅಶೋಕ್ ರೈ ಸ್ಪರ್ಧಿಸಿದರೆ ಅವರೇ ಗೆಲ್ಲುವುದು ಎಂಬ ಭಾವನೆ ಸ್ಥಳೀಯರಲ್ಲಿದೆ.
ಇದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಪುತ್ತೂರು ಎಲ್ಲಿ ಮತ್ತೆ ಕೈ ತಪ್ಪಿ ಹೋಗುವುದೋ ಎಂಬ ಭೀತಿಯಲ್ಲಿ ವಿಜಯೇಂದ್ರ ಈಗಲೇ ನಗರಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಏನೇ ಆದರೂ ಜನರು ಬೆಂಬಲಿಸುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೇ ಇದ್ದರೆ ಯಾವ ಅಭ್ಯರ್ಥಿಯಾದರೂ ಗೆಲ್ಲುವುದು ಕಷ್ಟವೇ ಎಂಬುದನ್ನು ನಾಯಕರು ಅರಿತುಕೊಳ್ಳಬೇಕು.