ಬೆಂಗಳೂರು: ಇತ್ತೀಚೆಗಷ್ಟೇ ನಮ್ಮನ್ನಗಲಿದ ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಹೊಸ ಘೋಷಣೆ ಮಾಡಿದ್ದಾರೆ.
ಮರಗಳನ್ನೇ ಮಕ್ಕಳಂತೆ ಸಾಕಿ ಸಲಹಿಸಿದ ಶತಾಯುಷಿ ಸಾಲು ಮರದ ತಿಮ್ಮಕ್ಕ ಮೊನ್ನೆಯಷ್ಟೇ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದರು. ಅವರು ಪರಿಸರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಹೆಸರಿನಲ್ಲಿ ಇಂದು ಸಿಎಂ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ದತ್ತಿ ನಿಧಿಯನ್ನು ಸ್ಥಾಪಿಸಿ, ಠೇವಣಿ ಇರುವ ಹಣದ ಬಡ್ಡಿಯಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಹಾಗೂ ಕನಿಷ್ಠ ಐದು ಪರಿಸರವಾದಿಗಳಿಗೆ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಸಾಲುಮರದ ತಿಮ್ಮಕ್ಕನ ಅಂತಿಮ ದರ್ಶನ ಪಡೆದಿದ್ದ ಸಿಎಂ ಸಿದ್ದರಾಮಯ್ಯಗೆ ಕುಟುಂಬಸ್ಥರು ಅವರ ಕೊನೆಯ ಆಸೆಯನ್ನು ತಿಳಿಸಿದ್ದರು. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ಹೇಳಿದ್ದರು. ಅದನ್ನು ಈಡೇರಿಸುವ ಭರವಸೆ ನೀಡಿದ್ದರು.