Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ: ಇದು ಸಾಧನೆಯಲ್ಲ ಕನ್ನಡಿಗರ ದುರಂತ ಎಂದ ಅಶೋಕ್

R Ashok

Krishnaveni K

ಬೆಂಗಳೂರು , ಗುರುವಾರ, 20 ನವೆಂಬರ್ 2025 (14:39 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಇದು ಕನ್ನಡಿಗರ ದುರಂತ ಎಂದಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷ ಪೂರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಅಶೋಕ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಈ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಜನರಿಗೆ ನೀಡಿದ್ದು ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ ಎಂಬ ಮೂರು ದೌರ್ಭಾಗ್ಯಗಳನ್ನು ಎಂದಿದ್ದಾರೆ.

‘ಕಾಂಗ್ರೆಸ್ ಪಕ್ಷ ಕೊಟ್ಟ ಪ್ರತಿ ಭರವಸೆಯೂ ಹುಸಿಯಾಗಿದೆ, ಪ್ರತಿ ಗ್ಯಾರಂಟಿಯೂ ಹೊರೆಯಾಗಿದೆ. ಕಳೆದ 30 ತಿಂಗಳುಗಳಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ದಾಖಲೆಯನ್ನು ಮುರಿದಿದೆ: ದಾಖಲೆ ಮಟ್ಟದ ಭ್ರಷ್ಟಾಚಾರ, ದಾಖಲೆ ಮಟ್ಟದ ಸಾಲ, ದಾಖಲೆ ಮಟ್ಟದ ದುರ್ವರ್ತನೆ.

ಪ್ರತಿ ಇಲಾಖೆಯೂ ನಿಷ್ಕ್ರಿಯ, ಎಲ್ಲ ಯೋಜನೆಗಳೂ ಸ್ತಬ್ಧ, ಮತ್ತು ಪ್ರತಿ ಹಗರಣವೂ ಹಿಂದಿನದನ್ನು ಮೀರಿಸುತ್ತಿದೆ.

ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದಿತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಖಾತರಿಪಡಿಸುವುದು ಕೇವಲ ನಿರಂತರ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ.  ಕನ್ನಡಿಗರು ಕಾಂಗ್ರೆಸ್ ಪಕ್ಷವನ್ನ ನಂಬಿ ಮತ ನೀಡಿದ್ದಕ್ಕೆ ತೆತ್ತುತ್ತಿರುವ ಬೆಲೆ ಇದು.

ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ರೈತರು ಆಕ್ರೋಶದಲ್ಲಿದ್ದಾರೆ, ಯುವಕರು ನಿರುದ್ಯೋಗ, ಅಭಿವೃದ್ಧಿ ಶೂನ್ಯತೆಯಿಂದ ಬೇಸತ್ತಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆ ಕುಸಿತದಿಂದ ಜನಸಾಮಾನ್ಯರು, ಮಹಿಳೆಯರು ಕಂಗಾಲಾಗಿದ್ದಾರೆ.

ಕಳೆದ 30 ತಿಂಗಳುಗಳಲ್ಲಿ 2,400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಮತ್ತು ಗುತ್ತಿಗೆದಾರರೂ ಸಹ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಂಗಳೂರಿನ ಮೂಲಸೌಕರ್ಯವು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಸರ್ವರೋಗಕ್ಕೂ ಒಂದೇ ಮದ್ದು ಎನ್ನುವಂತೆ, ತನ್ನಿಂದ ಸೃಷ್ಟಿಯಾದ ಅವ್ಯವಸ್ಥೆಯನ್ನು ಸರಿಪಡಿಸುವ ಬದಲು, ಕಾಂಗ್ರೆಸ್ ಸರ್ಕಾರ ಪ್ರತಿ ವೈಫಲ್ಯಕ್ಕೂ, ಪ್ರತಿ ಸಮಸ್ಯೆಗೂ ಕೇಂದ್ರ ಸರ್ಕಾರವನ್ನು ದೂಷಿಸುವುದು, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನೇ ಕಾಯಕವಾಗಿಸಿಕೊಂಡಿದೆ.

ಇದು ಸರ್ಕಾರವಲ್ಲ; ಇದು 2.5 ವರ್ಷಗಳ ದುರಂತ. ಕನ್ನಡ ನಾಡಿನ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ತಪ್ಪಿಗೆ ದಿನನಿತ್ಯ ಪಶ್ಚಾತಾಪ ಪಡುತ್ತಿದ್ದಾರೆ. ಈ ನಾಲಾಯಕ್ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಬಿಸಾಕಲು ಕಾತುರದಿಂದ ಕಾಯುತ್ತಿದ್ದಾರೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಬರಿಮಲೆ ಯಾತ್ರಿಕರ ವಿಡಿಯೋ ಹಂಚಿಕೊಂಡು ಕಷ್ಟ ವಿವರಿಸಿದ ಸಿಟಿ ರವಿ