ಬೆಂಗಳೂರು: ಬೆಂಗಳೂರಿಗೆ ಅಭಿವೃದ್ಧಿ ಬೇಕು; ಆದರೆ, ನಮ್ಮ ಪರಿಸರ ಮತ್ತು ಜನರ ಜೀವದ ಜೊತೆ ಚೆಲ್ಲಾಟ ಬೇಡ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಪ್ರಕೃತಿಯನ್ನು ನಾಶಪಡಿಸಿ, ಕೆರೆಗಳನ್ನು ಹಾಳುಮಾಡಿ, ಅವೈಜ್ಞಾನಿಕ ಮೇಲುಸೇತುವೆಗಳನ್ನು ನಿರ್ಮಿಸಿ, ಸ್ಯಾಂಕಿ ಕೆರೆಯ ನಾಶಕ್ಕೆ ಮುಂದಾಗಿದೆ. ಈ ಕೆರೆಯ ಸಂರಕ್ಷಣೆಗಾಗಿ ಸಹಿ ಸಂಗ್ರಹ, ವೀಕ್ಷಣೆ ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆಯನ್ನು ಇಂದು ಮಲ್ಲೇಶ್ವರದ 18ನೇ ಕ್ರಾಸ್ ಬಳಿ ಇರುವ ಸ್ಯಾಂಕಿ ಕೆರೆಯ ಮುಖ್ಯದ್ವಾರದ ಬಳಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುರಂಗ ರಸ್ತೆಯ ಡಿಪಿಆರ್ ಅವೈಜ್ಞಾನಿಕ ಎಂದು ಟೀಕಿಸಿದರು.
ಬೆಂಗಳೂರಿಗೆ ಸರಿಹೊಂದುವ ಡಿಪಿಆರ್ ಮಾಡಬೇಕು. ಇಲ್ಲಿ ಪರಿಸರವೇ ನಮಗೆ ಮುಖ್ಯ. ಬೆಂಗಳೂರನ್ನು ಉದ್ಯಾನಗಳ ನಗರ, ಕೆರೆಗಳ ನಗರ ಎಂದು ಕರೆಯಲಾಗುತ್ತಿತ್ತು. ಇವತ್ತು ರಾಜ್ಯ ಸರಕಾರವು ಕಮಿಷನ್ ಹೊಡೆಯಲು, ದುಡ್ಡು ಮಾಡಲೆಂದು ಅವೈಜ್ಞಾನಿಕ ಡಿಪಿಆರ್ ತಯಾರಿಸಿದೆ. ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಸ್ಯಾಂಕಿ ಟ್ಯಾಂಕ್, ಲಾಲ್‍ಬಾಗ್, ಕಬ್ಬನ್ ಪಾರ್ಕ್ ಹಾಳು ಮಾಡಲು, ಕೆರೆಗಳನ್ನು ಮುಳುಗಿಸಲು ನೀವು ಹೊರಟಿದ್ದೀರಿ. ಈಗಾಗಲೇ ಕೆರೆಗಳನ್ನು ರಿಯಲ್ ಎಸ್ಟೇಟ್ ದಂಧೆಗಳು ಪೂರ್ತಿ ನುಂಗಿ ಹಾಕಿವೆ. ತರಾತುರಿಯಲ್ಲಿ ಡಿಪಿಆರ್ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಯಾವ ತಜ್ಞರು, ಯಾವ್ಯಾವ ತಂಡಗಳಿಂದ ಇದರ ಅಧ್ಯಯನ ಆಗಿದೆ ಎಂದು ಕೇಳಿದರು. ಪರಿಸರದ ಮೇಲಿನ ಹಾನಿಯ ಅಧ್ಯಯನ ಆಗಿದೆಯೇ? ಸಾಂಸ್ಕತಿಕ, ಮಾಲಿನ್ಯದ ಮೇಲಿನ ಪ್ರಭಾವದ ಅಧ್ಯಯನ ನಡೆಸಿದ್ದೀರಾ? ಎಂದು ಪ್ರಶ್ನಿಸಿದರು. ಇದ್ಯಾವುದನ್ನೂ ಮಾಡದೇ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದು ಆಕ್ಷೇಪಿಸಿದರು.