Select Your Language

Notifications

webdunia
webdunia
webdunia
webdunia

ಸಿಎಂ, ಗೃಹ ಸಚಿವರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ

Vijayendra

Krishnaveni K

ಬೆಂಗಳೂರು , ಸೋಮವಾರ, 10 ನವೆಂಬರ್ 2025 (15:11 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
 
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯವನ್ನು ಖಂಡಿಸಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ಬಳಿಕ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿ, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‍ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು- ಇವರೆಲ್ಲರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿದೆ. ಇಂಥ ದೇಶದ್ರೋಹಿಗಳಿಗೆ ಟಿ.ವಿ., ಮೊಬೈಲ್ ಫೋನ್, ಗುಂಡು- ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
 
ರಾಜ್ಯ ಸರಕಾರವು ಕಣ್ಮುಚ್ಚಿ ಕುಳಿತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಗಳನ್ನು ಪರಪ್ಪನ ಅಗ್ರಹಾರ ಜೈಲಲ್ಲಿ ಮಾಡಲಾಗಿದೆ. ಪತ್ರಿಕೆಗಳಲ್ಲಿ- ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿ ಬಂದ ನಂತರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಿನ್ನೆ ದಾಳಿ ಮಾಡಿದ್ದಾರೆ ಎಂದು ಟೀಕಿಸಿದರು.
 
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದೇರೀತಿ ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ. ಕಾಂಗ್ರೆಸ್ ಸರಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿ ಜೈಲಿನಲ್ಲಿ ವ್ಯವಸ್ಥೆ ಆಗಲು ಸಾಧ್ಯವಿಲ್ಲ. ಇಸ್ಲಾಮಿನ ಮೂಲಭೂತವಾದಿಗಳಿಗೆ ಈ ರೀತಿ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.
 
ಇದಕ್ಕೆ ರಾಜ್ಯದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ನೇರ ಹೊಣೆಗಾರರು. ಸುಮ್ಮನೆ ನಾಟಕ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು. ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ; ಕಗ್ಗೊಲೆ ಆಗುತ್ತಿದೆ ಎಂದು ರಾಜೀವ್ ಗಾಂಧಿಯವರು ಹೊರದೇಶಕ್ಕೆ ಹೋದಾಗ ಭಾಷಣ ಮಾಡಿ ಅಪಮಾನ ಮಾಡುತ್ತಾರೆ. ಅದರ ಭಾಗವಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹಾಗೂ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಯನ್ನು ಸಿದ್ದರಾಮಯ್ಯರ ಸರಕಾರವು ಜೈಲಿನಲ್ಲೇ ಕಲ್ಪಿಸಿದಂತಿದೆ ಎಂದು ತಿಳಿಸಿದರು.
 
ಹೀಗೇ ಬಿಟ್ಟರೆ ಸಿದ್ದರಾಮಯ್ಯರ ಸರಕಾರ ದೇಶದ್ರೋಹಿಗಳ ಕೇಸನ್ನು ಹಿಂಪಡೆಯಲೂ ಹೇಸುವುದಿಲ್ಲ ಎಂದು ವಿಜಯೇಂದ್ರ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಆಕ್ಷೇಪಿಸಿದರು. ಮಾನ- ಮರ್ಯಾದೆ ಇದ್ದರೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ: ಸಿ.ಟಿ.ರವಿ ಆಕ್ಷೇಪ