ಬೆಂಗಳೂರು: ಮುಸ್ಲಿಂ ಭವನಗಳಿಗೆ ಸೌಲಭ್ಯ ಕಲ್ಪಿಸಲು 67 ಕೋಟಿ ರೂ. ಅನುದಾನ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಹಿಂದೂಗಳು ನಿಮಗೆ ವೋಟ್ ಹಾಕಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮುಸ್ಲಿಂ ಭವನಗಳಿಗೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ 67 ಕೋಟಿ ರೂ. ಅನುದಾನ ನೀಡಿದೆ. ಮಸೀದಿ, ವಕ್ಫ್ ಜಾಗದಲ್ಲಿ ಭವನ ನಿರ್ಮಾಣ ಮಾಡಲಿದೆ. ಒಟ್ಟು 7 ಜಿಲ್ಲಾ ಕೇಂದ್ರಗಳಿಗೆ ಅನುದಾನ ನೀಡಲಾಗಿದೆ.
ಈ ವರದಿಯ ಬಗ್ಗೆ ಆರ್ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರಿಗೆ ಬರ-ನೆರೆ ಪರಿಹಾರ ನೀಡಲು ಹಣವಿಲ್ಲ, ನೌಕರರ ಸಂಬಳಕ್ಕೆ ಹಣವಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಹಣವಿಲ್ಲ, ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ, ಜನಕಲ್ಯಾಣ ಕಾರ್ಯಕ್ರಮಕ್ಕೆ ಹಣವಿಲ್ಲ, ಮಕ್ಕಳ ಬಿಸಿಯೂಟಕ್ಕೆ ಹಣವಿಲ್ಲ. ಆದರೆ ಮುಸ್ಲಿಂ ಭವನಗಳ ನಿರ್ಮಾಣಕ್ಕೆ ₹67 ಕೋಟಿ ಇದೆ. ಮುಸ್ಲಿಮರಿಗೆ ತುಷ್ಟೀಕರಣದ ಭಾಗ್ಯ, ಓಲೈಕೆ ಗ್ಯಾರೆಂಟಿ! ಹಿಂದೂಗಳಿಗೆ? ತೆರಿಗೆ, ತೊಂದರೆ, ಚೊಂಬು ಗ್ಯಾರೆಂಟಿ!
ತುಷ್ಟೀಕರಣ, ಓಲೈಕೆಗೂ ಒಂದು ಇತಿಮಿತಿ ಬೇಡವೇ ಸಿಎಂ ಸಿದ್ದರಾಮಯ್ಯನವರೇ? ಹಿಂದೂಗಳು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಲ್ಲವಾ? ಅಥವಾ ರಾಹುಲ್ ಗಾಂಧಿ ಅವಾಗ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ? ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.