ಬೆಂಗಳೂರು: ಬಿಜೆಪಿಯವರು ಒಮ್ಮೆಯಾದ್ರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದರಾ? ಹೈಕಮಾಂಡ್ ಗೆ ಕಪ್ಪ ಕೊಟ್ಟೇ ಅಲ್ವಾ ಅವರ ನಾಯಕರು ಸಿಎಂ ಆಗಿದ್ದು.. ಹೀಗಂತ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಡಿಕೆ ಶಿವಕುಮಾರ್ ಸಿಎಂ ಆಗಲು ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ? ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ?
ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದ್ದಿದೆಯೇ?
ಮೊದಲ ಅವಧಿಯ ಅಧಿಕಾರದಲ್ಲಿ 3 ಮುಖ್ಯಮಂತ್ರಿಗಳನ್ನು ಬದಲಿಸಿ, ಎರಡನೇ ಅಧಿಕಾರಾವಧಿಯಲ್ಲಿ 2 ಮುಖ್ಯಮಂತ್ರಿಗಳನ್ನು ಬದಲಿಸಿದ ಹಾಗೂ ಆಪರೇಷನ್ ಕಮಲವೆಂಬ ಕರ್ನಾಟಕ ರಾಜಕಾರಣದ ಕರಾಳ ಅದ್ಯಾಯವನ್ನು ಆರಂಭಿಸಿದ ಬಿಜೆಪಿ ಪಕ್ಷದವರಿಗೆ ಕಾಂಗ್ರೆಸ್ ಹೆಸರೆತ್ತುವುದಕ್ಕೆ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ.
“ಹೈಕಮಾಂಡ್ ಕಪ್ಪ“ದ ಬಗ್ಗೆ ಬಹಳ ಆಸಕ್ತಿಯಿಂದ ಮಾತನಾಡುವ ಬಿಜೆಪಿ,
ಯಡಿಯೂರಪ್ಪನವರು ಹೈಕಮಾಂಡಿಗೆ ಎಷ್ಟು ಕಪ್ಪ ಕೊಟ್ಟು ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು? ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸವರಾಜ್ ಬೊಮ್ಮಯಿಯವರು ಎಷ್ಟೆಷ್ಟು ಬಿಡ್ ಕೂಗಿ ಮುಖ್ಯಮಂತ್ರಿಗಳಾದರು ಎಂಬ ಪ್ರಶ್ನೆಗಳಿಗೆ ಉತ್ತರಿಸುವುದೇ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಶ್ನೆಗಳು ನಮ್ಮದಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು “ಪೇಮೆಂಟ್ ಸೀಟ್“ ಎಂದು ಯತ್ನಾಳ್ ಅವರೇ ಹೇಳಿದ್ದರು. ಮಂತ್ರಿಗಿರಿಗೆ 70ರಿಂದ 80 ಕೋಟಿ ವಸೂಲಿಯಾಗಿತ್ತು ಎಂಬ ಸತ್ಯವನ್ನೂ ಬಿಜೆಪಿಯವರೇ ಬಹಿರಂಗಪಡಿಸಿದ್ದರು.
ಬಿಜೆಪಿಯವರ ಈ ಎಲ್ಲಾ ವಿಚಾರಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದಿವೆ, ಜನತೆಗೆ ಉತ್ತರಿಸುವ ನೈತಿಕತೆ ತೋರಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.