ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ವಿದ್ಯಮಾನ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗಿಂತ ಮೊದಲು ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಜೊತೆ ರಾಹುಲ್ ಗಾಂಧಿ ಮೀಟಿಂಗ್ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕದನದ ನಡುವೆ ನಿನ್ನೆ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರನ್ನು ರಾಹುಲ್ ಗಾಂಧಿ ದೆಹಲಿಯ ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದರು. ಇಂದು ಪ್ರಿಯಾಂಕ್ ಖರ್ಗೆಯವರ ಜೊತೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಶಾಸಕರ ಅಭಿಪ್ರಾಯ ಸಂಗ್ರಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಗೆ ತೆರಳಿದ್ದು ರಾಹುಲ್ ಜೊತೆ ಸಭೆ ನಡೆಸಲಿದ್ದಾರೆ. ರಾಹುಲ್ ಸಭೆ ಕರೆದರೆ ಚರ್ಚೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳಿಗೆ ಹೇಳಿದ್ದರು.
ಆದರೆ ಅವರಿಗಿಂತ ಮೊದಲು ಪ್ರಿಯಾಂಕ್ ಖರ್ಗೆಗೆ ಬುಲಾವ್ ನೀಡಿದ್ದ ರಾಹುಲ್ ಗಾಂಧಿ ಸುದೀರ್ಘ ಚರ್ಚೆ ನಡೆಸಿ ರಾಜ್ಯದ ವಿದ್ಯಮಾನಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ವಿಶೇಷವೆಂದರೆ ಎರಡು ದಿನ ಡಿಕೆಶಿ ದೆಹಲಲಿಯದ್ದು ರಾಹುಲ್ ಭೇಟಿಗೆ ಪ್ರಯತ್ನಿಸಿದ್ದರೂ ಅವರು ಅಪಾಯಿಂಟ್ ಮೆಂಟ್ ಕೊಟ್ಟಿರಲಿಲ್ಲ. ಆದರೆ ನಿನ್ನೆ ಬಿಕೆ ಹರಿಪ್ರಸಾದ್, ಇಂದು ಪ್ರಿಯಾಂಕ್ ಖರ್ಗೆ ಸದ್ದಿಲ್ಲದೇ ರಾಹುಲ್ ಗಾಂಧಿ ಭೇಟಿ ಮಾಡಿ ಬಂದಿದ್ದಾರೆ.