ನವದೆಹಲಿ: ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಕುರ್ಚಿ ಫೈಟ್ ಸರಿಪಡಿಸಲು ಹೊರಟ ಕಾಂಗ್ರೆಸ್ ಹೈಕಮಾಂಡ್ ಗೆ ಈಗ ಹಳೆಯ ಅದೊಂದು ವಿಚಾರವೇ ಕಾಡುತ್ತಿದೆ ಎನ್ನಲಾಗಿದೆ.
ವಿಧಾನಭೆ ಚುನಾವಣೆ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೇ ಮೊದಲು ಸಿಎಂ ಯಾರು ಎಂಬ ಪ್ರಶ್ನೆ ಬಂದಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಸಿಎಂ ಆಯ್ಕೆ ಮಾಡಲು ಕಾಂಗ್ರೆಸ್ ಕೆಲವು ದಿನ ತೆಗೆದುಕೊಂಡಿತ್ತು.
ಮೂಲಗಳ ಪ್ರಕಾರ ಅಂದು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಸಭೆಯೊಂದು ನಡೆದಿತ್ತು. ಅಂದು ಪವರ್ ಶೇರಿಂಗ್ ಬಗ್ಗೆ ಒಪ್ಪಂದವಾಗಿತ್ತು. ಮೊದಲು ಸಿಎಂ ಆಗುವುದು ಯಾರು ಎಂದು ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಮೊದಲ ಆಯ್ಕೆಯಾದರು. ಎರಡೂವರೆ ವರ್ಷದ ನಂತರ ಡಿಕೆಶಿಗೆ ಕುರ್ಚಿ ಬಿಟ್ಟುಕೊಡಬೇಕು ಎಂದು ಒಪ್ಪಂದವಾಗಿತ್ತು ಎನ್ನಲಾಗಿದೆ. ಈ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು.
ಕೊನೆಗೆ ಆಣೆ ಪ್ರಮಾಣದ ನಂತರ ಅಧಿಕಾರ ಹಂಚಿಕೆ ಒಪ್ಪಂದವಾಯ್ತು ಎನ್ನಲಾಗಿದೆ. ಇದನ್ನೇ ಎಚ್ ವಿಶ್ವನಾಥ್ ಕೂಡಾ ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಅಂದು ಅಧಿಕಾರ ಹಂಚಿಕೆಗೆ ಹೈಕಮಾಂಡ್ ಒಪ್ಪಿತ್ತು. ಇದನ್ನೇ ಈಗ ಡಿಕೆಶಿ ಹೈಕಮಾಂಡ್ ಗೆ ನೆನಪಿಸುತ್ತಿದ್ದಾರೆ. ಹೀಗಾಗಿ ಹೈಕಮಾಂಡ್ ಗೆ ಈಗ ಅಂದಿನ ಮಾತು ತಪ್ಪುವಂತೆಯೂ ಇಲ್ಲ, ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಪ್ರಯೋಗ ಮಾಡುವಂತೆಯೂ ಇಲ್ಲ ಎಂಬ ಸ್ಥಿತಿಯಾಗಿದೆ.