Select Your Language

Notifications

webdunia
webdunia
webdunia
webdunia

ಬಿಜೆಪಿ ವತಿಯಿಂದ ಸಂವಿಧಾನ ಮತ್ತು ಅಂಬೇಡ್ಕರ್ ಗಾಗಿ ವಿಶೇಷ ಕಾರ್ಯಕ್ರಮ

Chalavadi Narayanaswamy

Krishnaveni K

ಮೈಸೂರು , ಮಂಗಳವಾರ, 25 ನವೆಂಬರ್ 2025 (13:52 IST)
ಮೈಸೂರು: ಬಿಜೆಪಿ ವತಿಯಿಂದ ನ.26ರಿಂದ ಡಿ.6ರವರೆಗೆ ಸಂವಿಧಾನ ದಿನಾಚರಣೆ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಸ್ಮರಣೆ ಸಂಬಂಧ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ, ಮೈಸೂರು ಮಹಾನಗರ ಹಾಗೂ ಗ್ರಾಮಾಂತರ ಮೈಸೂರು ಜಿಲ್ಲೆ ವತಿಯಿಂದ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಕ್ಷದ ಅಧ್ಯಕ್ಷರ ಆದೇಶದಂತೆ ಇದು ನಡೆಯಲಿದೆ. ನ.26 ಅನ್ನು ಕಾನೂನು ದಿನ ಎಂದು ನೆರವೇರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಜೀ ಅವರು ಸಂವಿಧಾನಕ್ಕೆ ಗೌರವ ಕೊಡುವ ಮತ್ತು ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕಾರ್ಯ ಆಗಲು ಸಂವಿಧಾನ ದಿನಾಚರಣೆ ಸಂಬಂಧ ಆದೇಶ ಮಾಡಿದ್ದರು ಎಂದು ವಿವರಿಸಿದರು.

ಬಿಜೆಪಿ ಎಂದರೆ ಅದು ದಲಿತ ವಿರೋಧಿ, ಡಾ. ಅಂಬೇಡ್ಕರರ ವಿರೋಧಿ; ಸಂವಿಧಾನ ವಿರೋಧಿ, ಮೀಸಲಾತಿ ರದ್ದು ಮಾಡುತ್ತಾರೆಂದು ವಿಪಕ್ಷಗಳು ಆಪಾದಿಸುತ್ತಿದ್ದವು. ಕಾಂಗ್ರೆಸ್ ಪಕ್ಷ ಹೆಚ್ಚಾಗಿ ಇದನ್ನು ಮಾಡಿದೆ ಎಂದು ಆಕ್ಷೇಪಿಸಿದರು. ಆದರೆ, ಸಂವಿಧಾನದ ಹೆಸರು ಹೇಳಿ ಸಂವಿಧಾನಕ್ಕೆ ದೋಖಾ ಮಾಡಿದ್ದು ಅದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.

ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಹೆಸರು ಹೇಳುತ್ತ ಅವರಿಗೆ ಮೋಸ ಮಾಡಿದ್ದು ಅದೇ ಕಾಂಗ್ರೆಸ್ ಪಕ್ಷ ಎಂದು ನೆನಪಿಸಿದರು. ಮೀಸಲಾತಿ ಬಗ್ಗೆ ಮಾತನಾಡುತ್ತಲೇ ಮೀಸಲಾತಿಯಿಂದ ಈ ದೇಶ ಉದ್ಧಾರ ಆಗುವುದಿಲ್ಲ ಎಂದು ನೆಹರೂ ಅವರು ಹೇಳಿದ್ದರು. ಅದೂ ಅದೇ ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ಈಗ ಸಂವಿಧಾನ ರಕ್ಷಣೆ ಎಂದು ಹೊರಟಿದ್ದಾರೆ ಎಂದು ದೂರಿದರು.

1975-76ರಲ್ಲಿ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರು ಯಾರು? ಬಿಜೆಪಿಯೇ? ಕಾಂಗ್ರೆಸ್ಸಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು; ತುರ್ತು ಪರಿಸ್ಥಿತಿ ಹೇರಿ ಎರಡೂವರೆ ವರ್ಷಗಳ ಕಾಲ ಸಂವಿಧಾನವೇ ಈ ದೇಶದಲ್ಲಿ ಆಡಳಿತದಲ್ಲಿ ಇರಲಿಲ್ಲ.  ಇದು ಮಾಡಿದವರು ಕಾಂಗ್ರೆಸ್ ಅಲ್ಲವೇ? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.

ಈಗ ಸಂವಿಧಾನಕ್ಕೆ ಆಪತ್ತು ಬಂದಿಲ್ಲ; ಯಾವ ಮುಖ ಇಟ್ಟುಕೊಂಡು ಸಂವಿಧಾನ ರಕ್ಷಣೆ ಮಾತನಾಡುತ್ತೀರಿ ಎಂದು ಕೇಳಿದರು. ಮೋದಿಜೀ ಅವರು ಸಂವಿಧಾನವನ್ನು ಬಹಳ ಗಟ್ಟಿಯಾಗಿ ಇಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.

ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರನ್ನು ಮೊದಲ ಚುನಾವಣೆಯಲ್ಲಿ ಸೋಲಿಸಿದ್ದು ಕೂಡ ಕಾಂಗ್ರೆಸ್ ಪಕ್ಷವೇ ಎಂದರು. ಮನ ನೊಂದ ಡಾ. ಅಂಬೇಡ್ಕರ್ ಅವರು, ಕಾಂಗ್ರೆಸ್ ಪಕ್ಷ ಒಂದು ಸುಡುವ ಮನೆ ಇದ್ದಂತೆ; ಅದಕ್ಕೂ ಮುಂದೆ ಭವಿಷ್ಯ ಇರುವುದಿಲ್ಲ; ಅದರಲ್ಲಿ ಹೋದವರಿಗೂ ಭವಿಷ್ಯ ಇರುವುದಿಲ್ಲ ಎಂದಿದ್ದಾಗಿ ಗಮನ ಸೆಳೆದರು.

ಸ್ವಲ್ಪ ತಡ ಆಗಿರಬಹುದು. ಅವರ ಮಾತು ಈಗ ಈಡೇರುವ ಕಾಲ ಬಂದಿದೆ. ಆದ್ದರಿಂದ ಇಡೀ ದೇಶದಲ್ಲಿ ಕಾಂಗ್ರೆಸ್ ಒಂದು ಮುಳುಗುವ ಹಡಗಾಗಿದೆ. ಇಂಡಿ ಒಕ್ಕೂಟದಲ್ಲಿ ಕಾಂಗ್ರೆಸ್ ನಾಯಕತ್ವ ನಮಗೆ ಬೇಡ ಎನ್ನುತ್ತಿದ್ದಾರೆ. ಅದಕ್ಕೆ ರಾಷ್ಟ್ರೀಯ ಪಕ್ಷ ಎಂಬ ಗೌರವವೂ ಉಳಿದಿಲ್ಲ ಎಂದು ತಿಳಿಸಿದರು.

ಡಾ. ಅಂಬೇಡ್ಕರರ ಪಂಚ ಕ್ಷೇತ್ರಗಳನ್ನು ಇವತ್ತು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿದ್ದು ಬಿಜೆಪಿ. ಸಂವಿಧಾನ ದಿನಾಚರಣೆ ಮಾಡಿದ್ದು, ಬಿಜೆಪಿ. ಇವತ್ತು ಅವರ ಸ್ಮರಣೆ ಮಾಡುತ್ತಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ; ಬಹುದಿನಗಳ ಕಾಲ ಕಾಂಗ್ರೆಸ್ ಕಚೇರಿಯಲ್ಲೂ ಅಂಬೇಡ್ಕರರ ಫೋಟೊ ಹಾಕುತ್ತಿರಲಿಲ್ಲ; ಕಾಂಗ್ರೆಸ್ಸಿಗರಿಗೆ ಅವರ ಮೇಲೆ ಗೌರವ ಇರಲಿಲ್ಲ ಎಂದು ದೂರಿದರು. ದಲಿತ ಸಮುದಾಯ ಡಾ. ಅಂಬೇಡ್ಕರರ ಹೆಸರಿನಲ್ಲಿದೆ. ಅವರ ಮತಬ್ಯಾಂಕ್ ಕಳಕೊಳ್ಳುವುದು ಹೇಗೆ ಎಂಬ ಕಾರಣಕ್ಕೆ ಅವರ ಫೋಟೊ ಹಾಕಲು ಶುರು ಮಾಡಿದ್ದಾರೆ ಎಂದು ವಿವರಿಸಿದರು.

ಭಾರತರತ್ನದ ವಿಷಯದಲ್ಲೂ ಕಾಂಗ್ರೆಸ್ ನಡವಳಿಕೆ ಎಲ್ಲ್ಲರಿಗೂ ಗೊತ್ತಿದೆ. ಇಡೀ ಕಾಂಗ್ರೆಸ್ಸಿನ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ- ಎಲ್ಲರಿಗೂ ಕೊಟ್ಟರು. ಅವರೇ ಅಧಿಕಾರದಲ್ಲಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಭಾರತ ರತ್ನ ಕೊಡುತ್ತಿದ್ದರು ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಮನೆ ಇಲ್ಲದವರು ಇದ್ದರೆ ಅದು ರಾಹುಲ್ ಗಾಂಧಿ ಅವರ ಕುಟುಂಬ. ಚುನಾವಣೆ ಸ್ಪರ್ಧಿಸುವ ಪ್ರಮಾಣಪತ್ರದಲ್ಲೂ ಅದನ್ನು ತಿಳಿಸಿದ್ದಾರೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

Video: ಮದುವೆ ಸಂಭ್ರಮಾಚರಣೆ ವೇಳೆ ಹೈಡ್ರೋಜನ್ ಬಲೂನ್ ಸ್ಪೋಟ: ವಧು ವರರ ಕತೆ ಏನಾಯ್ತು