ಬೆಂಗಳೂರು: ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತೀ ತಿಂಗಳು 12 ರಿಂದ 15 ಲಕ್ಷ ರೂ. ಆಂಬ್ಯುಲೆನ್ಸ್ ಗೆ ದಾನ ಮಾಡ್ತಿದ್ದೇನೆ ಎಂದಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಪ್ರದೀಪ್ ಈಶ್ವರ್ ಏನು ಮಾಡ್ತಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಎಲ್ಲಾ ಇದ್ದು ದಾನ ಮಾಡೋದು ದಾನ ಅಲ್ಲ, ಏನೂ ಇಲ್ಲದೇ ಇದ್ದರೂ ಅಗತ್ಯವಿದ್ದವರಿಗೆ ದಾನ ಮಾಡುವುದು ದಾನ ಎಂದಿದ್ದಾರೆ.
ನನ್ನ ಶಾಸಕರ ವೇತನ, ಪರಿಶ್ರಮ್ ಅಕಾಡಮಿಯ ಗಳಿಕೆ ಎಲ್ಲಾ ಸೇರಿ ತಿಂಗಳಿಗೆ 12-15 ಲಕ್ಷ ರೂ. ಅಮ್ಮ ಆಂಬ್ಯುಲೆನ್ಸ್ ಗೆ ನೀಡುತ್ತಿದ್ದೇನೆ. ಯಾರಾದ್ರೂ ಕರೆ ಮಾಡಿದ್ರೆ 10 ನಿಮಿಷದಲ್ಲಿ ಆಂಬ್ಯುಲೆನ್ಸ್ ಅವರ ಮನೆ ಮುಂದೆ ಬಂದು ನಿಲ್ಲುತ್ತದೆ.
ನನ್ನ ಕ್ಷೇತ್ರವನ್ನು ನೋಡಿಕೊಳ್ಳುವುದಕ್ಕೆಂದೇ 40 ಜನರ ತಂಡ ಕಟ್ಟಿದ್ದೇನೆ. ತಲಾ ಇಬ್ಬರು ಹಗಲು ಮತ್ತು ರಾತ್ರಿ ಶಿಫ್ಟ್ ಗಳಲ್ಲಿ ಅಮ್ಮ ಆಂಬ್ಯುಲೆನ್ಸ್ ನೋಡಿಕೊಳ್ಳಲೆಂದೇ ನೇಮಿಸಿದ್ದೇನೆ. ಎಸ್ಎಸ್ಎಲ್ ಸಿ ಓದುವ ವಿದ್ಯಾರ್ಥಿಗಳಿಗೆ 1,000 ರೂ. ಸ್ಕಾಲರ್ ಶಿಪ್ ನೀಡುತ್ತಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಸಾವಿರಾರು ಜನರು ಇದಕ್ಕೆ ಸಾಕ್ಷಿ. ಚಿಕ್ಕಬಳ್ಳಾಪುರಕ್ಕೆ ನಾನು ಏನು ಮಾಡಿದ್ದೇನೆ ಎನ್ನುವವರಿಗೆ ಇದೇ ನನ್ನ ರಿಪೋರ್ಟ್ ಕಾರ್ಡ್ ಎಂದಿದ್ದಾರೆ.