ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಫೋನ್ ಕದ್ದಾಲಿಕೆ ವಿಚಾರ ಭಾರೀ ಸದ್ದು ಮಾಡ್ತಿದೆ. ಒಂದೆಡೆ ವಿಪಕ್ಷ ನಾಯಕ ಆರ್ ಅಶೋಕ್ ನನ್ನದು, ಕುಮಾರಸ್ವಾಮಿಯವರದ್ದು ಫೋನ್ ಕದ್ದಾಲಿಕೆಯಾಗ್ತಿದೆ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ ಗೃಹಸಚಿವ ಜಿ ಪರಮೇಶ್ವರ್ ನಂಗೆ ಇದರ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.
ಹನಿಟ್ರ್ಯಾಪ್ ಗದ್ದಲದ ನಡುವೆ ಈಗ ರಾಜ್ಯ ರಾಜಕೀಯದಲ್ಲಿ ಫೋನ್ ಟ್ಯಾಪಿಂಗ್ ವಿಚಾರ ಸದ್ದು ಮಾಡುತ್ತಿದೆ. ಸರ್ಕಾರವೇ ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡ್ತಿದೆ ಎಂದು ಆರ್ ಅಶೋಕ್ ಆಪಾದಿಸಿದ್ದಾರೆ. ಇದರಲ್ಲಿ ಸಂಶಯವೇ ಬೇಡ, ಇದು ರಾಜ್ಯ ಸರ್ಕಾರದ್ದೇ ಕೆಲಸ ಎಂದಿದ್ದಾರೆ.
ಫೋನ್ ಟ್ಯಾಪಿಂಗ್ ಬಗ್ಗೆ ಈಗಾಗಲೇ ಕೆಲವು ನಾಯಕರು ಸಿಎಂ ಸಿದ್ದರಾಮಯ್ಯಗೆ ಮೌಖಿಕ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.
ನನಗೆ ಫೋನ್ ಟ್ಯಾಪಿಂಗ್ ಬಗ್ಗೆ ಗೊತ್ತಿಲ್ಲ. ಇದುವರೆಗೆ ಯಾರೂ ನನ್ನ ಸಂಪರ್ಕಿಸಿ ಮಾಹಿತಿ ನೀಡಿಲ್ಲ ಎಂದಿದ್ದಾರೆ. ವಿಶೇಷವೆಂದರೆ ಇಂತಹದ್ದೊಂದು ಆರೋಪ ಮೊದಲು ಮಾಡಿರುವುದು ಕಾಂಗ್ರೆಸ್ ನಾಯಕರೇ. ಹೀಗಾಗಿ ರಾಜ್ಯ ಬಿಜೆಪಿಗೆ ಈಗ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.