ಬೆಂಗಳೂರು: ರಾಜ್ಯ ರಾಜಕಾರಣ ಯಾವ ಮಟ್ಟ ತಲುಪಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಹನಿಟ್ರ್ಯಾಪ್ ಆರೋಪದ ಬೆನ್ನಲ್ಲೇ ಈಗ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿದೆ.
ಸದನದಲ್ಲೇ ಹನಿ ಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡಿತ್ತು. ಸಚಿವ ಕೆಎನ್ ರಾಜಣ್ಣ ಅವರೇ ಹನಿಟ್ರ್ಯಾಪ್ ಆರೋಪ ಮಾಡಿದ್ದರು. ನನ್ನನ್ನು ಎರಡು ಬಾರಿ ಹನಿಟ್ರ್ಯಾಪ್ ಮಾಡಲು ಯತ್ನ ನಡೆದಿತ್ತು ಎಂದಿದ್ದರು. ಇದಲ್ಲದೆ, ಆಡಳಿತ, ವಿಪಕ್ಷ ಸೇರಿದಂತೆ 40 ಕ್ಕೂ ಹೆಚ್ಚು ರಾಜಕೀಯ ನಾಯಕರ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದಿದ್ದರು.
ಈ ಆರೋಪ ಭಾರೀ ಸದ್ದು ಮಾಡುತ್ತಿರುವಾಗಲೇ ಈಗ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿದೆ. ರಾಜ್ಯದ ಕೆಲವು ಪ್ರಭಾವೀ ಸಚಿವರು, ಶಾಸಕರ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಕೆಲವು ನಾಯಕರು ಈಗಾಗಲೇ ಮೌಖಿಕ ದೂರು ಸಲ್ಲಿಸಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಇದುವರೆಗೆ ಯಾರೂ ಅಧಿಕೃತ ದೂರು ನೀಡಿಲ್ಲ. ಅಧಿಕೃತ ದೂರು ನೀಡದೇ ತನಿಖೆ ಮಾಡಲು ಆಗಲ್ಲ ಎಂದು ಗೃಹಸಚಿವರು ಕೈ ಚೆಲ್ಲಿ ಕೂತಿದ್ದಾರೆ. ಅದರ ನಡುವೆ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯ ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಆತಂಕ ಮೂಡುತ್ತಿದೆ.