ನವದೆಹಲಿ: ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ಹನಿಟ್ರ್ಯಾಪ್ ಪ್ರಕರಣ ಈಗ ಸುಪ್ರೀಂ ಕೋರ್ಟ್ ಅಂಗಳ ತಲುಪಿಸಿದೆ. ಸಚಿವರು, ನ್ಯಾಯಾಧೀಶರು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಪಿಎಎಲ್ ಅರ್ಜಿಯ ಪರಿಶೀಲನೆಗೆ ಸುಪ್ರೀಂಕೋರ್ಟ್ ಇಂದು ಹಸಿರು ನಿಶಾನೆ ನೀಡಿದೆ.
ಮಾಧ್ಯಮ ವರದಿಗಳ ಆಧಾರದ ಮೇಲೆ ಧನ್‌ಬಾದ್ ನಿವಾಸಿ ವಿನಯ್ ಕುಮಾರ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿನಯ್ ಪರ ವಕೀಲರಾದ ವರುಣ್ ಕುಮಾರ್ ಸಿಂಗ್ ಅವರು ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆಗೆ ಸಮ್ಮತಿ ಸೂಚಿಸಿದ್ದು, ಮುಂದಿನ ಸೋಮವಾರ ಅಥವಾ ಮಂಗಳವಾರ ಈ ಅರ್ಜಿಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಇಂತಹ ಪ್ರಕರಣಗಳನ್ನು ನ್ಯಾಯಾಧೀಶರು ರಾಜಿ ಮಾಡಿಕೊಳ್ಳುವುದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಭೀರ ಅಪಾಯ ಎದುರಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಲು ಬಯಸಿರುವ ಆಕಾಂಕ್ಷಿಯೊಬ್ಬರು ನ್ಯಾಯಾಧೀಶರು ಸೇರಿದಂತೆ ಸಚಿವರು, ಶಾಸಕರನ್ನು ಹನಿಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಾಲಿ ಸಚಿವರೊಬ್ಬರು ಆರೋಪಿಸಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವಿಧಾನಸಭೆಯಲ್ಲೇ ಈ ವಿಚಾರ ಪ್ರಸ್ತಾಪವಾಗಿದೆ ಎಂದು ವಿವರಿಸಿದ್ದಾರೆ.