Publish Date: Mon, 07 Oct 2024 (14:31 IST)
Updated Date: Mon, 07 Oct 2024 (14:34 IST)
ಚಿತ್ರದುರ್ಗ: ಪೋಕ್ಸೋ ಖಾಯಿದೆಯಡಿ ಬಂಧಿತರಾಗಿದ್ದ ಚಿತ್ರದುರ್ಗದ ಮುರುಘಾಶ್ರೀ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿದೆ. ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ಹಿನ್ನಲೆಯಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶ ನೀಡಿದೆ.
ಈ ಹಿಂದೆ ಹೈಕೋರ್ಟ್ ಜಾಮೀನು ನೀಡಿದ್ದರೂ ಎಲ್ಲಾ ಸಂತ್ರಸ್ತರ ವಿಚಾರಣೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಅವರ ಬಿಡುಗಡೆಗೆ ಕೋರ್ಟ್ ತಡೆ ನೀಡಿತ್ತು. ಇಬ್ಬರು ಸಂತ್ರಸ್ತ ಬಾಲಕಿಯರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನಲೆಯಲ್ಲಿ ಕೋರ್ಟ್ ಮುರುಘಾಶ್ರೀ ಬಿಡುಗಡೆಗೆ ಆದೇಶಿಸಿದೆ.
ಸದ್ಯಕ್ಕೆ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಕೋರ್ಟ್ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ಸಿಕ್ಕ ಬಳಿಕವಷ್ಟೇ ಬಿಡುಗಡೆಯಾಗಲಿದ್ದಾರೆ. ಸದ್ಯಕ್ಕೆ ಅವರು ಚಿತ್ರದುರ್ಗ ಜೈಲಿನಲ್ಲಿದ್ದು ಬಿಡುಗಡೆಯಾದ ಬಳಿಕ ದಾವಣಗೆರೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಮಠದಲ್ಲಿ ಬಾಲಕಿಯರ ಮೇಲೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ವಿಚಾರ ಭಾರೀ ಮಟ್ಟದಲ್ಲಿ ಸುದ್ದಿಯಾಗಿತ್ತು. 2022 ರ ಆಗಸ್ಟ್ ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1 ರಂದು ಅವರನ್ನು ಪೊಲೀಸರು ಬಂಧಿಸಿದ್ದರು.