ಬೆಂಗಳೂರು: ನಟ ದರ್ಶನ್ ಮನೆಯೂಟ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದ ದರ್ಶನ್‌ಗೆ ಜೈಲೂಟನೇ ಗತಿಯಾಗಿದೆ.
ಜೈಲೂಟ ಸರಿಹೊಂದದೆ ಅಜೀರ್ಣ, ಅತಿಸಾರ ಆಗಿದೆ ಎಂದು ದರ್ಶನ್ ಅವರ ಪರ ವಕೀಲ ಮನೆಯೂಟ ನೀಡುವಂತೆ ಅನುಮತಿ ಕೇಳಿದ್ದರು. ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು.
ವಿಐಪಿ ಕೈದಿಗಳು ಮಾತ್ರ ಈ ರೀತಿ ಡಿಮ್ಯಾಂಡ್ ಮಾಡ್ತಾರೆ. ಬೇರೆ ಕೈದಿಗಳು ಜೈಲೂಟವನ್ನೇ ಸೇವನೆ ಮಾಡುತ್ತಾರೆ. ವಿಐಪಿಗಳಿಗೆ ಮಾತ್ರ ಇಂತಹ ಟ್ರೀಟ್ ಮೆಂಟ್ ಕೊಡಬಾರದು ಎಂದು ಸರ್ಕಾರೀ ಅಭಿಯೋಜಕರು ವಾದಿಸಿದ್ದರು. ಇದನ್ನು ಕೋರ್ಟ್ ಪುರಸ್ಕರಿಸಿದೆ.
ಇದಕ್ಕೆ ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಇನ್ನೂ ಹಲವು ದಿನಗಳ ಕಾಲ ದರ್ಶನ್ ಜೈಲೂಟ ಮಾಡುವುದು ಅನಿವಾರ್ಯ ಆಗಿದೆ.
ಎರಡೂ ಕಡೆ ವಾದವನ್ನು ಆಲಿಸಿದ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಇದೀಗ ಆದೇಶ ಹೊರಡಿಸಿದ್ದಾರೆ.
ಕೋರ್ಟ್ ಕೊಟ್ಟ ಕಾರಣಗಳಿವು: ಕೊಲೆ ಪ್ರಕರಣದ ಆರೋಪಿಗಳಿಗೆ ಮನೆಯೂಟ, ಬಟ್ಟೆ ಮತ್ತು ಹಾಸಿಗೆ ನೀಡಲು ಅವಕಾಶವಿಲ್ಲ. ಜೈಲಿನ ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ದರ್ಶನ್ ಕೊಲೆ ಪ್ರಕರಣದ ಆರೋಪಿಯಾಗಿರುವುದರಿಂದ ಈ ಸೌಲಭ್ಯ ನೀಡಲು ಆಗುವುದಿಲ್ಲ ಎಂದಿದ್ದಾರೆ.