ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀರಾಟವಾಡುತ್ತಿದ್ದ ಆನೆಗೆ ಅಡ್ಡಿಪಡಿಸಿದ್ದಕ್ಕೆ ಸಿಬ್ಬಂದಿಗೆ ಮಾಡಿದ್ದೇನು ಗೊತ್ತಾ? ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಈಗ ಚಂಪಾ ಷಷ್ಠಿಯ ಜಾತ್ರಾ ಮಹೋತ್ಸವದ ಸಂದರ್ಭ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ನೀರು ಬಂಡಿ ಉತ್ಸವವಿರುತ್ತದೆ. ಈ ಸಂದರ್ಭದಲ್ಲಿ ದೇವಾಲಯದ ಆನೆ ನೀರಾಟವಾಡುವುದನ್ನು ನೋಡುವುದೇ ಖುಷಿ.
ಇಂತಹದ್ದೇ ಸಂದರ್ಭದಲ್ಲಿ ಆನೆ ಭಕ್ತರೊಂದಿಗೆ ನೀರೆರಚಿಕೊಂಡು ಆಡುವುದರಲ್ಲಿ ತಲ್ಲೀನವಾಗಿತ್ತು. ಆದರೆ ಈ ವೇಳೆ ತನ್ನ ಮುಂದೆ ಬಂದು ನೀರೆರಚಲು ಅಡ್ಡಿಪಡಿಸಿದ್ದಕ್ಕೆ ಆನೆಗೆ ಕೋಪವೇ ಬಂದಿತ್ತು. ಹೀಗಾಗಿ ಸಿಬ್ಬಂದಿಯನ್ನು ಸೊಂಡಿಲಿನಿಂದ ಸೈಡಿಗೆ ಹೋಗೋ ಎನ್ನುವಂತೆ ಎತ್ತಿ ಬಿಸಾಕಿದೆ.
ನೀರಿಗೆ ಬಿದ್ದ ಸಿಬ್ಬಂದಿಗೆ ಅದೃಷ್ಟವಶಾತ್ ಬೇರೇನೂ ಆಗಲಿಲ್ಲ. ಬಳಿಕ ಆನೆ ತನ್ನ ಪಾಡಿಗೆ ತಾನು ಸೊಂಡಿಲಿನಲ್ಲಿ ನೀರು ತುಂಬಿ ಭಕ್ತರತ್ತ ಎರಚಿ ಸಂಭ್ರಮ ಮುಂದುವರಿಸಿತ್ತು. ಈ ವಿಡಿಯೋ ಈಗ ವೈರಲ್ ಆಗಿದೆ.