ಬೆಂಗಳೂರು: ಇಂದಿನಿಂದ ರಾಜ್ಯ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು ಇದರ ಬಗ್ಗೆ ಈಗ ಬಿಜೆಪಿ ಬೆಂಬಲಿಗರಿಂದಲೇ ಆಕ್ರೋಶ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.
ಇತ್ತೀಚೆಗೆ ಸಾಕಷ್ಟು ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಕಿಸೆಗೆ ಕತ್ತರಿ ಹಾಕಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟಕ್ಕಿಳಿದಿದ್ದು ಇಂದಿನಿಂದ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ. ಇದರಲ್ಲಿ ರಾಜ್ಯ ಬಿಜೆಪಿ ನಾಯಕರೆಲ್ಲರೂ ಭಾಗಿಯಾಗುತ್ತಿದ್ದಾರೆ.
ಆದರೆ ಜನಾಕ್ರೋಶ ಯಾತ್ರೆ ಬಗ್ಗೆ ಕೆಲವು ಬಿಜೆಪಿ ಬೆಂಬಲಿಗರೇ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಕಾಂಗ್ರೆಸ್ ಶಾಸಕರೊಬ್ಬರ ಕಿರುಕುಳವೇ ಕಾರಣ ಎನ್ನಲಾಗಿದೆ.
ಅದರ ಬಗ್ಗೆ ಒಂದೆರಡು ದಿನ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ನಾಯಕರು ಸುಮ್ಮನಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸನಗೌಡ ಯತ್ನಾಳ್ ರನ್ನು ಉಚ್ಛಾಟನೆ ಮಾಡಿದ ಬಳಿಕ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ತೋರಿಸಿಕೊಳ್ಳಲು ಈ ಪ್ರತಿಭಟನಾ ಯಾತ್ರೆ ನಡೆಯುತ್ತಿದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.