Publish Date: Wed, 11 Feb 2026 (09:18 IST)
Updated Date: Wed, 11 Feb 2026 (09:21 IST)
ನವದೆಹಲಿ: ಅಸ್ಸಾಂ ಚುನಾವಣೆ ತಯಾರಿ ನೆಪದಲ್ಲಿ ದೆಹಲಿಗೆ ತೆರಳಿದ್ದ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಏನು ಎಂಬುದು ಈಗ ಬಯಲಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭುಗಿಲೆದ್ದಿದೆ. ಇಂತಹ ಸನ್ನಿವೇಶದಲ್ಲಿ ಕಾಕತಾಳೀಯ ಎಂಬಂತೆ ಡಿಕೆ ಶಿವಕುಮಾರ್ ಗೆ ಅಸ್ಸಾಂ ಚುನಾವಣೆ ತಯಾರಿ ಕುರಿತು ಚರ್ಚಿಸಲು ಪ್ರಿಯಾಂಕ ಗಾಂಧಿ ವಾದ್ರಾ ಬುಲಾವ್ ನೀಡಿದ್ದರು.
ಇದನ್ನೇ ನೆಪ ಮಾಡಿಕೊಂಡು ಬಜೆಟ್ ಸಿದ್ಧತಾ ಸಭೆಯನ್ನೂ ಬಿಟ್ಟು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಅವರು ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ನಾಯಕರ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಬಾರಿ ಏನೇ ಆಗಲಿ ನೇರವಾಗಿ ಸೋನಿಯಾ ಗಾಂಧಿಯವನ್ನೇ ಭೇಟಿಯಾಗಿ ಚರ್ಚೆ ಮಾಡಿದರೂ ಅಚ್ಚರಿಯಿಲ್ಲ.
ತಮ್ಮ ಜೊತೆಗೆ ಎಷ್ಟು ಶಾಸಕರಿದ್ದಾರೆ ಎಂದು ಹೈಕಮಾಂಡ್ ಗೆ ಮನವರಿಕೆ ಮಾಡಲೂ ಸಕಲ ಸಿದ್ಧತೆ ಮಾಡಿಕೊಂಡೇ ತೆರಳಿದ್ದಾರೆ. ನಿನ್ನೆ ದೆಹಲಿಗೆ ತೆರಳುವಾಗಲೂ ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದರು. ಇದರೊಂದಿಗೆ ಈಗ ಮತ್ತೆ ಕುರ್ಚಿ ಕಾಳಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.