Publish Date: Tue, 04 Jul 2023 (20:00 IST)
Updated Date: Tue, 04 Jul 2023 (17:50 IST)
ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಮಾಡಲು ಹೋಗಿದ್ದ ಕಾನ್ಸ್‌ಟೇಬಲ್ ಮೇಲೆ ಮತ್ತೊಂದು ಕಾರು ಹರಿದು ಅವರು ದುರಂತ ಅಂತ್ಯಕಂಡ ಘಟನೆ ಇಂದು ಬೆಳಗಿನ ಜಾವ ದೇವನಹಳ್ಳಿ ಹೈವೇಯ ಚಿಕ್ಕಜಾಲ ಬಳಿ ನಡೆದಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಸುರೇಶ್ ಮೃತ ಕಾನ್ಸ್‌ಟೇಬಲ್. ದೇವನಹಳ್ಳಿ ಇನ್ಸ್ಪೆಕ್ಟರ್ ಧರ್ಮೇಗೌಡ ಮತ್ತು ಅವರ ಜೀಪ್ ಚಾಲಕ ಸುರೇಶ್ ಚಿಕ್ಕಜಾಲ ಬಳಿ ಬಂದಾಗ ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಕಂಡು ಪರಿಶೀಲನೆಗೆ ಮುಂದಾಗಿದ್ದಾರೆ. ಕಾನ್ಸ್‌ಟೆಬಲ್ ಸುರೇಶ್ ಜೀಪ್ನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅದೇ ಸಮಯಕ್ಕೆ ವೇಗವಾಗಿ ಬಂದ ಇನ್ನೊಂದು ಕಾರು ಸುರೇಶ್ ಅವರಿಗೆ ಡಿಕ್ಕಿಯಾಗಿದೆ. ಬಳಿಕ ಕೆಟ್ಟು ನಿಂತಿದ್ದ ಇನ್ನೋವಾ ಕಾರಿಗೂ ಗುದ್ದಿದೆ. ಪರಿಣಾಮ ಸುರೇಶ್ ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಇನ್ಸ್ಪೆಕ್ಟರ್ಗೆ ಫೋನ್ ಕಾಲ್ ಬಂದಿದ್ದು ಮಾತನಾಡಲು ಕೊಂಚ ರಸ್ತೆಬದಿಗೆ ತೆರಳಿದ್ದರಿಂದ ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ನಿಂತಿದ್ದ ಕಾರಿನಲ್ಲಿ ಕುಳಿತಿದ್ದ ಚಾಲಕನ ಕೈಕಾಲುಗಳಿಗೂ ಗಂಭೀರ ಗಾಯಗಳಾಗಿವೆ. ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೆಬಲ್ ಸುರೇಶ್ ದುರ್ಮರಣಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.