ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ರಾಜಕೀಯ ವಿದ್ಯಮಾನಗಳ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ವಾರ್ನಿಂಗ್ ನೀಡಿದೆ.
ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಸುದ್ದಿಯಾಗಿತ್ತು. ಸ್ವತಃ ಕಾಂಗ್ರೆಸ್ ಸಚಿವ ಕೆಎನ್ ರಾಜಣ್ಣನೇ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ತನ್ನನ್ನೂ ಸೇರಿದಂತೆ ಸಾಕಷ್ಟು ನಾಯಕರ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದಿದ್ದರು. ಇದು ವಿಪಕ್ಷಗಳಿಗೆ ಅಸ್ತ್ರವಾಗಿತ್ತು.
ಮೊನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಬಳಿ ಸ್ವತಃ ರಾಹುಲ್ ಗಾಂಧಿ ಈ ವಿಚಾರ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಏನೇ ಇದ್ದರೂ ಪಕ್ಷದ ನಾಯಕರ ಜೊತೆ ಚರ್ಚಿಸಬೇಕೇ ಹೊರತು, ಸದನದಲ್ಲಿ ಪ್ರಸ್ತಾಪಿಸಬಾರದಿತ್ತು ಎಂದಿದ್ದರು.
ಇದೀಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಎಲ್ಲೆ ಮೀರಿ ವರ್ತಿಸದಂತೆ ಎಚ್ಚರಿಕೆ ನೀಡಿದೆ. ಕೇವಲ ಸರ್ಕಾರ ಮತ್ತು ಆಡಳಿತದ ಕಡೆಗೆ ಗಮನಹರಿಸಿ. ಇಲ್ಲದ ವಿವಾದ ಮೈಮೇಲೆಳೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ವಾರ ಎಐಸಿಸಿ ಮೀಟ್ ನಡೆಯಲಿದ್ದು ಇದಕ್ಕೆ ಮೊದಲು ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.