ನವದೆಹಲಿ: ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರವನ್ನು ಬೀದಿರಂಪ ಮಾಡಿರುವುದಕ್ಕೆ ನಿನ್ನೆ ತಮ್ಮನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸದನದಲ್ಲಿ ಆಡಳಿತ ಪಕ್ಷದ ನಾಯಕರೇ ಹನಿಟ್ರ್ಯಾಪ್ ವಿಚಾರವನ್ನು ಬಟಾಬಯಲು ಮಾಡಿದ್ದರು. ಸಚಿವ ಕೆಎನ್ ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದಿದ್ದರು. ಈ ವಿಚಾರ ಭಾರೀ ಸದ್ದು ಮಾಡಿತ್ತು. ಸ್ವತಃ ಕಾಂಗ್ರೆಸ್ ನಾಯಕರ ಮೇಲೆಯೇ ಅನುಮಾನ ಮೂಡುವಂತಾಗಿತ್ತು.
ಇದರ ಬೆನ್ನಲ್ಲೇ ಹೈಕಮಾಂಡ್ ನಿಂದ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸದಂತೆ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು ಎನ್ನಲಾಗಿದೆ. ಇದೀಗ ನಿನ್ನೆ ರಾಹುಲ್ ಗಾಂಧಿ ಭೇಟಿಗೆ ಸಿಎಂ ಸಿದ್ದರಾಮಯ್ಯ ಹೋಗಿದ್ದ ವೇಳೆಯೂ ಇದೇ ವಿಚಾರ ಪ್ರಸ್ತಾಪವಾಗಿದೆ.
ರಾಹುಲ್ ಜೊತೆ ಸಿದ್ದರಾಮಯ್ಯ ಅರ್ಧಗಂಟೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹನಿಟ್ರ್ಯಾಪ್ ವಿಚಾರ ಏನೇ ಇದ್ದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಬಹುದಿತ್ತು. ಅದು ಬಿಟ್ಟು ಸದನದಲ್ಲಿ ಪ್ರಸ್ತಾಪಿಸಿದ್ದು ಯಾಕೆ ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗಿದೆ.