Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ: ಯಡಿಯೂರಪ್ಪ

Karnataka Congress Government

Sampriya

ಬೆಂಗಳೂರು , ಬುಧವಾರ, 2 ಏಪ್ರಿಲ್ 2025 (19:19 IST)
Photo Courtesy X
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬೆಲೆ ಏರಿಕೆಯ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವವರೆಗೆ ರಾಜ್ಯದ ಉದ್ದಗಲಕ್ಕೆ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಆರಂಭವಾದ ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸರಕಾರವು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದೆ. ನೀರಾವರಿ ಕಾರ್ಯಗಳನ್ನು ಮಾಡುತ್ತಿಲ್ಲ; ಸರಕಾರವು ಬೆಲೆ ಏರಿಕೆ ಮೂಲಕ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.

ನಾವೆಲ್ಲರೂ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡುತ್ತೇವೆ. ಈ ಸರಕಾರವು ಜನಹಿತವನ್ನು ಮರೆತು ಒಂದು ರೀತಿ ತುಘಲಕ್ ದರ್ಬಾರ್ ಮಾಡುತ್ತಿದ್ದು, ಇದನ್ನು ನಾವು- ನೀವು ಸೇರಿ ಖಂಡಿಸಬೇಕಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರ ಸರಕಾರಕ್ಕೆ ಜನಹಿತವು ಮುಖ್ಯವಲ್ಲ; ಈ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯದಂತೆ ನೋಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಅಜೀರ್ಣ ಆಗುವಷ್ಟು ಬಹುಮತವಿರುವ ಈ ಸರಕಾರ ಜನಹಿತವನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಮರೆತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ನಿರೀಕ್ಷೆಗೂ ಮೀರಿ ಜನರು, ಮಹಿಳೆಯರು ಸೇರಿದ್ದಾರೆ ಎಂದು ಅವರು ಹೇಳಿದರು.

ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಉಸಿರುಕಟ್ಟುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧ ಮನೆಮನೆಗೆ ತೆರಳಿ ಜನಜಾಗೃತಿ ಮೂಡಿಸಬೇಕು; ಈ ಸರಕಾರಕ್ಕೆ ಪಾಠ ಕಲಿಸಬೇಕು, ಅಧಿಕಾರ ಬಿಟ್ಟು ತೊಲಗುವಂತೆ ಹೇಳಬೇಕಿದೆ ಎಂದು ಅವರು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಿತ್ಯಾನಂದ ಸ್ವಾಮಿ ಇನ್ನಿಲ್ಲ ಸುದ್ದಿ ಬೆನ್ನಲ್ಲೇ ಕೈಲಾಸದಿಂದ ಸಿಕ್ತು ಬಿಗ್‌ ಅಪ್ಡೇಟ್‌