ನವದೆಹಲಿ: ವಕ್ಫ್ ಮಸೂದೆ ಮಂಡನೆಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಇದರಿಂದ ಸಾಮಾಜಿಕ, ಆರ್ಥಿಕ ನ್ಯಾಯ, ಪಾರದರ್ಶಕತೆ ಸಿಕ್ಕಂತಾಗಿದೆ ಎಂದು ಬಣ್ಣಿಸಿದ್ದಾರೆ.
ಸದ್ಯಕ್ಕೆ ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಕ್ಫ್ ಮಸೂದೆ ಪಾಸ್ ಆಗಿರುವುದು ಒಂದು ಐತಿಹಾಸಿಕ ಕ್ಷಣ ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ, ಆರ್ಥಿಕ ನ್ಯಾಯ, ಪಾರದರ್ಶಕತೆಗಾಗಿ ಮತ್ತು ಸಮಗ್ರ ಬೆಳವಣಿಗೆಗಾಗಿ ನಮ್ಮ ಸಾಮೂಹಿಕ ಪ್ರಯತ್ನಗಳಲ್ಲಿ ಇದೂ ಒಂದಾಗಿದೆ. ಇದೊಂದು ಐತಿಹಾಸಿಕ ಕ್ಷಣ. ಇದರಿಂದ ಅವಕಾಶ ವಂಚಿತರಾದವರಿಗೆ ಅಳಿವಿನಂಚಿನಲ್ಲಿರುವವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಮೊನ್ನೆ ತಡರಾತ್ರಿ ಲೋಕಸಭೆಯಲ್ಲಿ ಬಹುಮತದೊಂದಿಗೆ ವಕ್ಫ್ ಮಸೂದೆ ಪಾಸ್ ಆಗಿತ್ತು. ನಿನ್ನೆ ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ವಕ್ಫ್ ಮಸೂದೆ ಪಾಸ್ ಆಗಿದೆ. ಇನ್ನೀಗ ರಾಷ್ಟ್ರಪತಿಗಳ ಅಂಕಿತವೊಂದೇ ಬಾಕಿಯಿದೆ.